ಸುದ್ದಿಮೂಲ ವಾರ್ತೆ,
ಮೈಸೂರು, ಮೇ 11: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಹೊಂದಾಣಿಕೆ ರಾಜಕಾರಣ ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡಿದ ಆರೋಪಕ್ಕೆ ಆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ರಾಜಕಾರಣ ತಿಳಿದಿಲ್ಲ. ನನ್ನ ವಿರುದ್ದ ಯಾರನ್ನ ಕಣಕ್ಕಿಳಿಸಬೇಕು ಅನ್ನೋದು ಗೊತ್ತಿಲ್ಲ. ನನ್ನ ಜಾಯಮಾನದಲ್ಲಿ ನಾನು ಯಾರ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಮಾವಿನಹಳ್ಳಿ ಸಿದ್ದೇಗೌಡರನ್ನು ನಾನು ಯಾಕೆ ಬುಕ್ ಮಾಡಲಿ ಎಂದು ಕಿಡಿಕಾರಿದರು.
ಸಿದ್ಧರಾಮಯ್ಯ ಬರೀ ದ್ವೇಷದ ರಾಜಕಾರಣ ಮಾಡಿದರು ಅವರಿಗಾಗಿ ದುಡಿದ ಮರೀಗೌಡಗೆ ಟಿಕೆಟ್ ಕೊಡಬೇಕಿತ್ತು. ಸಿದ್ಧರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಸಿದ್ದೇಗೌಡನ ಬಗ್ಗೆ ಈ ಹಿಂದೆಯೇ ಸಿದ್ಧರಾಮಯ್ಯಗೆ ಹೇಳಿದ್ದೆ ನಾನು ಹೇಳಿದ್ದನ್ನೆಲ್ಲಾ ಸಿದ್ಧರಾಮಯ್ಯ ಮರೆತು ಹೋಗಿದ್ದಾರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರ ಆಶೀರ್ವಾದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರು ಮತದಾರರ ಕೈಗೆ ಸಿಗದೆ ನಾಪತ್ತೆಯಾಗುವ ಮೂಲಕ ಜಿ.ಟಿ ದೇವೇಗೌಡರ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪಕ್ಷ ಕಾರ್ಯಕರ್ತರು ಮಾವಿನಹಳ್ಳಿ ಸಿದ್ಧೇಗೌಡರ ವಿರುದ್ಧ ದೂರಿದ್ದರು.