ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದ್ದು ಮಾಧ್ಯಮಗಳಲ್ಲಿ ಬಂದಿರುವ ಮತದಾನೋತ್ತರ ಸಮೀಕ್ಷಾ ವರದಿ ಬೇಕಿಲ್ಲ, ಈ ಹಿಂದಿನ ಎಕ್ಸಿಟ್ ಪೋಲ್ ಸಮೀಕ್ಷೆಗಳೆಲ್ಲ ಉಲ್ಟಾ ಹೊಡೆದಿದ್ದವು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸರ್ವೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸಿಟ್ ಪೋಲ್ ಸರ್ವೆಗಳ ಕುರಿತು ಟ್ವೀಟ್ ಮಾಡಿರುವ ಬಿ.ಎಲ್. ಸಂತೋಷ್, ಬಿಜೆಪಿಗೆ 2014 ರಲ್ಲಿ 282, 2019 ರಲ್ಲಿ 303, 2022 ರಲ್ಲಿ 157 ಸ್ಥಾನ ಸಿಗುತ್ತೆ ಎಂದು ಯಾವ ಎಕ್ಸಿಟ್ ಪೋಲ್ ಸಹ ಭವಿಷ್ಯ ನುಡಿದಿರಲಿಲ್ಲ. ಆದರೆ, ಆಗೆಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳು ಉಲ್ಟಾ ಹೊಡೆದಿದ್ದವು. 2018 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯು 14 ಕ್ಷೇತ್ರಗಳ 24 ಸಾವಿರ ಬೂತ್ಗಳಲ್ಲಿ ಲೀಡ್ ಪಡೆದಿರಲಿಲ್ಲ. ಈ ಸಲ ಬಿಜೆಪಿಗೆ 31 ಸಾವಿರ ಬೂತ್ಗಳಲ್ಲಿ ಲೀಡ್ ಬರಲಿದೆ ಎಷ್ಟು ಸ್ಥಾನ ಗೆಲ್ತೀವಿ ಅಂತ ಸಮೀಕ್ಷೆ ನಡೆಸಿದವರಿಗೆ ಊಹಿಸಲು ಸಾಧ್ಯವಾಗಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ಅಂದರೆ ಮೇ 10 ರಂದು ಮತದಾನ ನಡೆದಿತ್ತು. ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಈ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ರಿಪಬ್ಲಿಕ್ ಟಿವಿ, ಟಿವಿ9 ಭಾರತವರ್ಷ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಮತ್ತೆ ಅತಂತ್ರ ಫಲಿತಾಂಶದ ಭವಿಷ್ಯ ನುಡಿದಿದೆ. ಸಿ ವೋಟರ್ ಕಾಂಗ್ರೆಸ್ಗೆ ಬಹುಮತದ ಅಂಚಿಗೆ ತಲುಪಲಿದೆ ಎಂದು ಭವಿಷ್ಯ ಹೇಳಿದ್ದರೆ, ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಇದೊಂದೆ ಅಲ್ಲ ಬಹುತೇಕ ಸಮೀಕ್ಷೆಗಳು ಹೀಗೆ ಇರುವುದರಿಂದ ಅಂತಿಮವಾಗಿ ಮೇ 13 ರಂದು ಮತದಾರರ ತೀರ್ಪು ಹೊರ ಬೀಳಲಿದೆ.
ಸಮೀಕ್ಷೆಗಳು ಸಂಪೂರ್ಣವಾಗಿ ಸತ್ಯವಾಗದಿದ್ದರು ನಾಡಿನ ಮತದಾರರ ಮನಸ್ಸು ಯಾವ ಕಡೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತವೆ. ಹೀಗಾಗಿ ಅಂತಿಮ ಫಲಿತಾಂಶ ಮೇ 13 ಕ್ಕೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.