ಸೂಲಿಬೆಲೆ, ಮೇ 12: ಮಕ್ಕಳಲ್ಲಿ ಚೆಸ್ ಹಾಗೂ ಮತ್ತಿತರ ಕ್ರೀಡೆಗಳಿಂದ ಬುದ್ದಿ ಮತ್ತು ಶಾರೀರಿಕ ಆರೋಗ್ಯ ವೃದ್ದಿ ಜೊತೆಗೆ ಶೈಕ್ಷಣಿಕ ಪ್ರಗತಿಯ ಕಡೆಗೂ ಉತ್ಸಾಹ ಹೆಚ್ಚಾಗುತ್ತದೆ ಎಂದು ಶೃಂಗ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅನುರೆಡ್ಡಿ ತಿಳಿಸಿದರು.
ತಾಲೂಕಿನ ದೊಡ್ಡದುನ್ನಸಂದ್ರ ಬಳಿ ಇರುವ ಶೃಂಗ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಬಾಲಕ ಬಾಲಕಿಯರ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬುದ್ದಿ ಶಕ್ತಿ ವೃದ್ದಿಸುವ ಕ್ರೀಡೆಗಳಲ್ಲಿ ಚೆಸ್ ಪ್ರಮುಖ ಪಾತ್ರ ವಹಿಸಲಿದೆ. ಬುದ್ದಿ ಚುರುಕಿನ
ಜೊತೆಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಪ್ರತಿ ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರಲಿದ್ದು ಅದನ್ನು ಹೊರತೆಗೆಯಲು ಮಕ್ಕಳಿಗೆ ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿಕೊಡಬೇಕು. ಇತ್ತೀಚಿನ ದಿನಗಳಲ್ಲಿ ಚೆಸ್ ಆಟ ಸಾಕಷ್ಟು ಮುಂಚೂಣಿ ಆಟಗಳಲ್ಲಿ ಒಂದಾಗಿದೆ. ಈ ಆಟವನ್ನು ಕೇವಲ ಸ್ಪರ್ಧೆಗಾಗಿ ಆಡದೆ ವ್ಯಕ್ತಿತ್ವ ವಿಕಸನದ ದೃಷ್ಠಿಯಿಂದಲೂ ಆಡುವ ಪರಿಪಾಠ ಬೆಳೆಸಿಕೊಳ್ಳಬೇಕು. ರಾಜ್ಯ ಮಟ್ಟದ
ಸ್ಪರ್ಧೆಯನ್ನು ಆಯೋಜನೆ ಮಾಡಿ ಮಕ್ಕಳನ್ನು ಪ್ರೇರೇಪಿಸುತ್ತಿರುವ ಚೆಸ್ ಅಸೋಸಿಯೇಷನ್ ಕಾರ್ಯ ಪ್ರಶಂಸನೀಯ ಎಂದರು.
ಕೇವಲ 9 ವರ್ಷಕ್ಕೆ ಚೆಸ್ ಆಟವನ್ನು ಕರಗತ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಆಟ ಆಡುತ್ತಿರುವ ಮಕ್ಕಳ ಆಸಕ್ತಿಗೆ ಸರಿಸಾಟಿಯಿಲ್ಲ. ಸಾಕಷ್ಟು ಆಸಕ್ತಿ ವಹಿಸಿ ಮಕ್ಕಳನ್ನು ಚೆಸ್ ಆಟದಲ್ಲಿ ಮಗ್ನರಾಗಿರುವುದುನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಮಕ್ಕಳ ಒಂದು ಆಟದಿಂದ ಅವರ ಬುದ್ದಿ ಶಕ್ತಿ ಅತಿ ತೀಷ್ಣವಾಗಿ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಅನುರೆಡ್ಡಿ ತಿಳಿಸಿದರು.
ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಚಿದಾನಂದ್ ಮಾತನಾಡಿ ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ರೀಡಾಪಟುಗಳನ್ನು ಆಯ್ಕೆ ಮಾಡುವ
ದೃಷ್ಠಿಯಿಂದ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ 9
ವರ್ಷದೊಳಗಿನ ತಲಾ 4 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಸ್ಪರ್ಧೆ ನಡೆಸಲಾಗುತ್ತಿದೆ. ಇಲ್ಲಿ
ವಿಜಯಶಾಲಿಯಾಗಳಾಗುವ ನಾಲ್ವರನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ 50 ಸಾವಿರ ನಗದಿನ ಬಹುಮಾನವನ್ನು ವಿತರಣೆ ಮಾಡಲಾಗುವುದು ಎಂದರು.
ಶೃಂಗ ಶಾಲೆ ವ್ಯವಸ್ಥಾಪಕ ಅಬ್ಬಯ್ಯರೆಡ್ಡಿ, ಕಾರ್ಯದರ್ಶಿ ಪ್ರಕಾಶ್, ವ್ಯವಸ್ಥಾಪಕ ನಿರ್ದೆಶಕ ಶ್ರೇಯಸ್ಸ್, ಸುಪ್ರಿತಾ, ಚೆಸ್ ಸ್ಪರ್ಧೆಯ ಆರ್ಬಿಟರ್ ಕೆ.ವಿ.ಶ್ರೀಪಾದ್, ಶೃಂಗ ಶಾಲೆ ಮುಖ್ಯಸ್ಥರಾದ ವಿಕಾಸ್, ಗೌರಂಗ್, ಸುಪ್ರೀತ್ ಇದ್ದರು.