ಸುದ್ದಿಮೂಲ ವಾರ್ತೆ
ಮೈಸೂರು, ಮೇ 12: ಈ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ನಡೆದ ಚುನಾಚವಣೆಯ ಮತ ಎಣಿಕೆ ಕಾರ್ಯವು ನಗರದ ಪಡುವಾರಹಳ್ಳಿಯಲ್ಲಿ ಇರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮೇ.13 ರಂದು ಬೆಳಗ್ಗೆ 8ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಈ ನಡುವೆ ಕಣದಲ್ಲಿ ಇದ್ದ ಅಭ್ಯರ್ಥಿಗಳ ಸೋಲೋ-ಗೆಲುವೋ ಎಂಬ ಟೆನ್ಸನ್ ಹೆಚ್ಚಾಗಿ ಎದೆಯಲ್ಲಿ ಢವ ಢವ ಶುರುವಾಗಿದೆ. ಮತದಾರರಲ್ಲಿ ಗೆಲುವಿನ ಮಾಲೆ ಯಾರಿಗೆ ಎಂಬ ಕುತೂಹಲ ಉಂಟಾಗಿದೆ. ಮಾಜಿ ಸಿಎಂ
ಸಿದ್ದರಾಮಯ್ಯ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಡಾ.ಎಚ್.ಸಿ.ಮಹಾದೇವಪ್ಪ ಸೇರಿದಂತೆ 143 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ.
ಕಾಲೇಜಿನ ಸುತ್ತ ಪೊಲೀಸರು ಮತ್ತು ಅರೆಸೇನಾಪಡೆ ಹದ್ದಿನ ಕಣ್ಣಿರಿಸಿದ್ದಾರೆ. ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲಿ ಬಾಗಿಲಿಗೆ ಹಾಕಿದ ಸೀಲ್ ತೆರೆಯಲಿದ್ದಾರೆ. ಭಾನುವಾರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೊರಡಿಸಿ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ, ಕೆ.ಆರ್.ನಗರ, ಪಿರಿಯಾಪಟ್ಟಣ, ವರುಣ ಮತ್ತು ಚಾಮರಾಜ ಕ್ಷೇತ್ರಗಳ ಮತ ಎಣಿಕೆಯು ನಡೆಯಲಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಗಳಿಗೆ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಸಿಆರ್ಪಿಎಫ್ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಸಶಸ್ತ್ರ ಮೀಸಲು ಪಡೆ ಹಾಗೂ ಸ್ಥಳೀಯ ಮೀಸಲು ಪಡೆಗಳು ಜೊತೆ ಇವೆ. 40ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಟ್ಟಡದ ಸುತ್ತ ಪ್ರಖರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಏನೇನು ಮಾಡಬಾರದು:
* ಚುನಾಯಿತ ಅಭ್ಯರ್ಥಿಗಳು ವಿಜಯೋತ್ಸವದ ಮೆರವಣಿಗೆ ಮಾಡುವಂತಿಲ್ಲ
* ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಾಸದ ಮನೆಗಳ ಮುಂದೆ ಸಿಡಿಸುವಂತಿಲ್ಲ.
* ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಐದು ಮಂದಿಗಿಂತ ಹೆಚ್ಚು ಜನ ಗುಂಪು ಸೇರುವುದು, ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.
* ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಪೋಟಕ ವಸ್ತು ಮತ್ತು ಇನ್ನಿತರ ಮಾರಕಾಸ್ತ್ರಗಳನ್ನು ಒಯ್ಯುವುದು, ಯಾವುದೇ ಮೆರವಣಿಗೆ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದು. ಧ್ವನಿವರ್ಧಕ
ಉಪಯೋಗಿಸುವುದು ಮತ್ತು ಬೈಕ್ ರ್ಯಾಲಿ ನಡೆಸುವುದನ್ನು ನಿಷೇಧಿಸಲಾಗಿದೆ.
ಕೆಎಸ್ಆರ್ಟಿಸಿ ಬಸ್ಗಳು ಹೀಗೆ ಸಂಚರಿಸಬೇಕು:
* ಮೈಸೂರು ನಗರದ ಕಡೆಯಿಂದ ಹುಣಸೂರು ಕಡೆಗೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಸುಗಳು ರಾಮಸ್ವಾಮಿ ಸುತ್ತ ಮುಡಾ ಜಂಕ್ಷನ್ ಎಡತಿರುವು – ಬೋಗಾದಿಸ್ತೆಯಲ್ಲಿ ಮುಂದುವರೆದು ಬೋಗಾದಿ ರಿಂಗ್ ರೋಡ್ ಮೂಲಕ ಹುಣಸೂರು ರಸ್ತೆ ತಲುಪುವುದು.
* ಮಡಿಕೇರಿ ಹುಣಸೂರು ಹಾಸನ ಕಡೆಯಿಂದ ಮೈಸೂರು ನಗರಕ್ಕೆ ಬರುವ ಕೆಎಸ್ಆರ್ಟಿಸಿ ಬಸ್ಸುಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ದೇವಸ್ಥಾನ ರಸ್ತೆಯಲ್ಲಿ ಸಾಗಿ ವಿವಿ ಪುರಂ ವೃತ್ತದಲ್ಲಿ ಬಲತಿರುವು ಪಡೆದು ಕೆ ಆರ್ ಎಸ್ ರಸ್ತೆಯಲ್ಲಿ ಸಾಗಿ ದಾಸಪ್ಪ ಜಂಕ್ಷನ್ ಮೂಲಕ ಮುಂದುವರೆಯುವುದು.
ನಿರ್ಬಂಧಿಸಿದ ರಸ್ತೆಗಳ ವಿವರ:
* ಕಲಾಮಂದಿರ ಜಂಕ್ಷನ್ ನಿಂದ ಸೆಂಟ್ ಜೋಸೆಫ್ ಜಂಕ್ಷನ್ವರೆಗೆ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ
ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ವಾಲ್ಮೀಕಿ ರಸ್ತೆ – ಕೆ.ಆರ್.ಎಸ್ ರಸ್ತೆ ಜಂಕ್ಷನ್ನಿಂದ ಹುಣಸೂರು ರಸ್ತೆ ವಾಲ್ಮೀಕಿ ರಸ್ತೆ ಜಂಕ್ಷನ್ವರೆಗಿನ
ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ಮಾತೃ ಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆಯವರೆಗೆ ಆದಿಪಂಪ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧ.
ಈ ಬದಲಿ ಮಾರ್ಗ ಅನುಸರಿಸಬೇಕು
* ಮೈಸೂರು ನಗರದಿಂದ ಹುಣಸೂರು ಕಡೆಗೆ ಹೋಗುವ ವಾಹನಗಳು ಡಿಸಿ ಆಫೀಸ್ ಆರ್ಚ್ ಗೇಟ್ ಜಂಕ್ಷನ್ ನಿಂದ ವೀರೇಂದ್ರ ಹೆಗ್ಗಡೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು (ಡಿಸಿ ಕಚೇರಿ ಆರ್ಚ್ ಗೇಟ್ ಜಂಕ್ಷನ್ ಬಳಿ ಎಡತಿರುವು ಪಡೆದು ಕೌಟಿಲ್ಯ ವೃತ್ತ ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು).
* ಹಾಸನ ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆ , ಕೆ.ಆರ್.ಎಸ್ ರಸ್ತೆ ಮೂಲಕ ಮುಂದೆ ಸಾಗುವುದು.