ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 13: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿರುವುದರ ಮಧ್ಯೆಯೇ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕಾರಣದತ್ತ ಕಾಂಗ್ರೆಸ್ ಮುಖಮಾಡಿದೆ ಎಂ ಮಾಹಿತಿಗಳು ಲಭ್ಯವಾಗುತ್ತಿವೆ.
ಗೆಲ್ಲುವ ಸಂಭವ ಇರುವಂತಹ ಎಲ್ಲ ಶಾಸಕರನ್ನು ಸಹ ಈಗಲೇ ಬೆಂಗಳೂರಿಗೆ ಹೊರಟು ಬರುವಂತೆ ಕಾಂಗ್ರೆಸ್ ಸೂಚನೆ ನೀಡಿದೆ ಎಂದು ಗೊತ್ತಾಗುತ್ತಿದೆ.
ರಾಜಸ್ತಾನದ ರೆಸಾರ್ಟ್ನತ್ತ ತನ್ನ ಶಾಸಕರನ್ನು ಸ್ಥಳಾಂತರಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 110 ಸ್ಥಾನಗಳಿಗಿಂತಲೂ ಹೆಚ್ಚಿನ ಲೀಡ್ನಲ್ಲಿದೆ. ಇದೇ ಓಟ ಮಧ್ಯಾಹ್ನದವರೆಗೂ ಮುಂದುವರಿದರೆ ಕಾಂಗ್ರೆಸ್ ಸರಳ ಬಹುಮತಕ್ಕೆ ಹತ್ತಿರ ಹತ್ತರದಲ್ಲಿಯೇ ಇರುತ್ತದೆ. ಆದರೆ, ಕೊನೆ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದರೂ ಆಗಬಹುದು ಎಂದು ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಹೊರ ರಾಜ್ಯದ ರೆಸಾರ್ಟ್ನತ್ತ ಹೊರಡಲು ಸಿದ್ಧವಾಗಿದೆ.
ಸದ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಇದ್ದಾರೆ. ಅವರು ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಬರುವ ನಿರೀಕ್ಷೆ ಇದ್ದು, ಸಂಜೆಯೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಇಂದು ಸಂಜೆಯೇ ತನ್ನ ಶಾಸಕರನ್ನು ರೆಸಾರ್ಟ್ನತ್ತ ಶಿಫ್ಟ್ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸದ್ಯ 75ರ ಆಸುಪಾಸಿನಲ್ಲಿ ಬಿಜೆಪಿ ಮತ್ತು 30ರ ಆಸುಪಾಸಿನಲ್ಲಿ ಜೆಡಿಎಸ್ ಹಾಗೂ 5ರ ಆಸುಪಾಸಿನಲ್ಲಿ ಪಕ್ಷೇತರರು ಇದ್ದಾರೆ. ಒಂದು ವೇಳೆ ಅವರೆಲ್ಲರೂ ಒಂದಾದರೆ ತನಗೆ ನಷ್ಟ ಆಗಬಹುದು ಎಂದು ಊಹಿಸಿರುವ ಕಾಂಗ್ರೆಸ್ ಈಗಲೇ ತನ್ನ ಕಾರ್ಯಾಚರಣೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.