ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಮೇ14: ತೀವ್ರ ಕುತೂಹಲ ಕೆರಳಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪರಾಭವಗೊಂಡು ಮುಖಭಂಗ ಅನುಭವಿಸುವಂತಾಗಿದೆ.
ಇನ್ನುಳಿದಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ಗಾಗಿ ಭುಗಿಲೆದ್ದ ಭಿನ್ನಮತದಿಂದ ಕಾಂಗ್ರೆಸ್ ಪಕ್ಷಕ್ಕೆ ಮೂರನೇ ಸ್ಥಾನಕ್ಕೆ ಜಿಗಿದು ಬಂಡಾಯ ಅಭ್ಯರ್ಥಿ ದ್ವಿತೀಯ ಸ್ಥಾನವನ್ನು ಕಾಯ್ದರಿಸಿಕೊಂಡು ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಗಿ ಭದ್ರತೆಯಲ್ಲಿ ನಡೆದ ಮತ ಎಣಿಕೆ ಕಾರ್ಯವನ್ನು ನಡೆಸಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದ್ದಾರೆ.
ರಾಜ್ಯದ ಗಡಿ ಪ್ರದೇಶವಾದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಎನ್.ಸುಬ್ಬಾರೆಡ್ಡಿ ಅವರು ಸತತವಾಗಿ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಸಿ.ಮುನಿರಾಜು ಅವರನ್ನು ಪರಾಭವಗೊಳಿಸಿದ್ದಾರೆ ಇನ್ನೂ ಜಿದ್ದಾಜಿದ್ದಿನ ಕಣವಾಗಿದ್ದ ವಾಣಿಜ್ಯ ನಗರಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳ ನಂತರ ಡಾ.ಎಂ.ಸಿ ಸುಧಾಕರ್ ಅವರು ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಜೆಕೆ ಕೃಷ್ಣರೆಡ್ಡಿ ಅವರನ್ನು ಸೋಲಿಸಿದ್ದಾರೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಿಕೊಂಡು ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ (ಆಂಜಿನಪ್ಪ) ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ಗೌಡ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆಯುವಂತಾಗಿದೆ.
ಸಮಾಜಸೇವಕನ ಕೈಹಿಡಿದ ಮತದಾರರು:
ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲಿ ಸತತವಾಗಿ ವಿಭಿನ್ನ ರೀತಿಯಲ್ಲಿ ಸಮಾಜಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ವಿರುದ್ಧ ಭಾರಿ ಬಹುಮತದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ ಸತತವಾಗಿ ಐದು ಬಾರಿಗೆ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅವರು 6ನೇ ಬಾರಿಗೆ ಶಾಸಕರಾಗುವ ಭಾಗ್ಯವನ್ನು ಕಳೆದುಕೊಂಡಿದ್ದಾರೆ.