ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 14: ಚುನಾವಣೆಯುದ್ಧಕ್ಕೂ ಒಗ್ಗಟ್ಟಿನ ಮಂತ್ರವನ್ನೇ ಜಪಿಸಿಕೊಂಡು ಬಂದ ಕಾಂಗ್ರೆಸ್ ನಾಯಕರು ಭರ್ಜರಿ ಗೆಲುವು ಸಾಧಿಸಿದ ಬಳಿಕವೂ ಇದು ಒಗ್ಗಟ್ಟಿಗೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಈಡೇರಿಸುವ ವಾಗ್ದಾನ ಮಾಡಿದ್ದಾರೆ.
ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ನೂತನ ಕಚೇರಿಯಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಬಿಕೆ ಹರಿಪ್ರಸಾದ್, ಸಲೀಂ ಸಹಿತ ಎಲ್ಲಾ ನಾಯಕರು ಒಂದಾಗಿ ಕೈ ಮೇಲುತ್ತುವ ಮೂಲಕ ಇದು ಒಗ್ಗಟ್ಟಿಗೆ ಸಂದ ಜಯ ಎಂಬ ಸಂದೇಶ ನೀಡಿದರು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಮಗೆ ದೊಡ್ಡ ಗೆಲುವು ಸಿಕ್ಕಿದ್ದು, ದೇಶದಲ್ಲಿ ಹೊಸ ಉತ್ಸಾಹ ತಂದಿದೆ. ಬಿಜೆಪಿ ಪ್ರತಿ ಸಲ ಕೆಣಕಿ ಮಾತನಾಡುತ್ತಿದ್ದಕ್ಕೆ ರಾಜ್ಯದ ಜನ ಉತ್ತರ ನೀಡಿದ್ದಾರೆ. ಈಗ ಬಿಜೆಪಿ ಮುಕ್ತ ದಕ್ಷಿಣ ಭಾರತವಾಗಿದೆ. ಅಹಂಕಾರದ ಮಾತು ಹೆಚ್ಚು ದಿನ ನಡೆಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ಎಷ್ಟು ಜನರ ಸಹಕಾರ ಪಡೆದು, ಅವರ ನೋವು ಅರಿತು, ಜನರ ಕಲ್ಯಾಣ ಮಾಡುತ್ತೇವೋ ಆಗ ಮಾತ್ರ ಜನರ ಮನಸ್ಸು ಗೆಲ್ಲಬಹುದು. ಇಂದಿನ ಗೆಲುವು ಕರ್ನಾಟಕದ ಜನರ ಗೆಲುವಾಗಿದೆ. ಇದು ಯಾವುದೇ ಒಬ್ಬ ವ್ಯಕ್ತಿಯ ಜಯವಲ್ಲ. ರಾಜ್ಯದ ಜನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಒಟ್ಟಾಗಿ ಆರಿಸಿದ್ದಾರೆ. ಹೀಗಾಗಿ 35 ವರ್ಷಗಳ ನಂತರ ಭಾರಿ ಬಹುಮತ ಸಿಕ್ಕಿದೆ ಎಂದರು.
ಇದಕ್ಕೆ ಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಪರಿಣಾಮದಿಂದ ಈ ಯಶಸ್ಸು ಸಿಕ್ಕಿದೆ. ಇದು ಸಾಮೂಹಿಕ ನಾಯಕತ್ವದ ಯಶಸ್ವಿಯಾಗುತ್ತದೆ. ನಿಮ್ಮಿಂದ ರಾಜ್ಯದ ಜನರಿಗೆ ನಮಿಸಿ ಧನ್ಯವಾದ ಹೇಳುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಮತ ಹಾಕಿರುವುದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ಇದು ಆಗದಿದ್ದರೆ ಸರ್ವಾಧಿಕಾರಿ ಮನಸ್ಥಿತಿ ಆಡಳಿತ ಮಾಡುತ್ತಿತ್ತು. ಹೀಗಾಗಿ ಜನ ಈ ತೀರ್ಮಾನ ಮಾಡಿದ್ದಾರೆ ಎಂದರು.
ನಮ್ಮ ನಾಯಕರು ಪ್ರತಿ ನಾಯಕರ ಮನೆಗೆ ಓಡಾಡಿ, ಪಕ್ಷದ ನಾಯಕರನ್ನು ಒಗ್ಗೂಡಿಸಿದ್ದಾರೆ. ಎಲ್ಲರ ಶ್ರಮದಿಂದ ಇಂದು ದೊಡ್ಡ ಜಯ ಸಿಕ್ಕಿದೆ. ಈಗ ನಮ್ಮ ಮುಂದೆ ಇರುವುದು ನಾವು ಕೊಟ್ಟ ಭರವಸೆ ಈಡೇರಿಸಿಸುವುದು. ನಾವು ಇದನ್ನು ಹೇಳಿಕೊಂಡು ಓಡಾಡಿದ್ದು, ಇದನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಭ್ರಷ್ಟಾಚಾರ ವಿರುದ್ಧದ ಗೆಲುವು. 40% ಕಮಿಷನ್, ಬೆಲೆ ಏರಿಕೆ, ರೈತರ ಸಂಕಷ್ಟಗಳ ವಿರುದ್ಧ, ಗೃಹಿಣಿಯರ ಕಣ್ಣೀರಿನ ವಿರುದ್ಧ, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್ ಗ್ಯಾರಂಟಿಗಳ ಪರ ಗೆಲುವು. ಇನ್ನು ಮುಂದೆ ಗೃಹಜ್ಯೋತಿ ಬೆಳಗಲಿದೆ. ಸರ್ಕಾರ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿಯಾಗಲಿದೆ. ಯುವನಿಧಿಯು ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ. ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸಲಿದೆ. ಮಹಿಳೆಯರು ಸುಖವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ನೆಮ್ಮೆದಿಯ ಉಸಿರು ಬಿಡಲಿದ್ದಾರೆ. ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡೇ ಮಾಡುತ್ತೇವೆ ಎಂದು ಹೇಳಿದರು.
7 ಕೋಟಿ ಕನ್ನಡಿಗರ ಗೆಲುವು:
ಸಿದ್ದರಾಮಯ್ಯ ಮಾತನಾಡಿ, ಇದು ಕಾಂಗ್ರೆಸ್ ಪಕ್ಷದ ಗೆಲುವು ಮಾತ್ರವಲ್ಲ, 7 ಕೋಟಿ ಕನ್ನಡಿಗರ ಗೆಲುವು. ಬಿಜೆಪಿಯವರು ಎಂದೂ ಜನರ ಆಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದವರಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದವರು. ಭ್ರಷ್ಟಾಚಾರ, ದುರಾಡಳಿತ, ನಿಷ್ಕ್ರಿಯತೆಗಳಿಂದ ಜನ ರೋಸಿ ಹೋಗಿ ಬದಲಾವಣೆ ಬಯಸಿದ್ದರು. ಈಗ ಜನರು ನಮಗೆ ನೀಡಿರುವ ಈ 5 ವರ್ಷದ ಅವಕಾಶವನ್ನು ಜನಪರವಾಗಿ ಆಡಳಿತ ನೀಡಿ ಸದುಪಯೋಗ ಮಾಡಿಕೊಳ್ಳಬೇಕಾಗಿದೆ ಎಂದರು.
ಈಗಾಗಲೇ ನಾವು ಏನು 5 ಗ್ಯಾರೆಂಟಿಗಳನ್ನು ನೀಡಿದ್ದೇವೆ ಅದನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಜಾರಿಗೆ ಕೊಡುತ್ತೇವೆ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.