ಸುದ್ದಿಮೂಲ ವಾರ್ತೆ
ಮೈಸೂರು, ಮೇ 14: ಇದೇ ಪ್ರಪ್ರಥಮ ಬಾರಿಗೆ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಅಪ್ಪ- ಮಗ ಏಕಕಾಲದಲ್ಲಿ ವಿಧಾನಸಭೆ ಪ್ರವೇಶ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ನಿಂದ ಶಾಸಕ ಜಿ.ಟಿ.ದೇವೇಗೌಡರು ಹ್ಯಾಟ್ರಿಕ್ ಗೆಲುವಿನನೊಂದಿಗೆ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದರೇ, ಅವರ ಪುತ್ರ ಜಿ.ಡಿ. ಹರೀಶ್ಗೌಡ ಹುಣಸೂರಿನಿಂದ ಜೆಡಿಎಸ್ನಿಂದ ಟಿಕೆಟ್ ಮೇಲೆ ಪ್ರಥಮ ಬಾರಿಗೆ ಆಯ್ಕಯಾಗಿದ್ದಾರೆ.
ಅಪ್ಪ- ಮಗ ಒಟ್ಟಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಿದ ಮೊದಲ ಪ್ರಕರಣ 2018 ರಲ್ಲಿ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2008, 2013 ರಲ್ಲಿ ಪ್ರತಿನಿಧಿಸಿದ್ದ ವರುಣ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರಗೆ ಬಿಟ್ಟುಕೊಟ್ಟಿದ್ದರು. ಅವರು ಈ ಹಿಂದೆ ಐದು ಬಾರಿ ಗೆದ್ದು, ಎರಡು ಬಾರಿ ಸೋತಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದರು. ದೂರದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಮೂರನೇ ಬಾರಿ ಸೋತು, ಬಾದಾಮಿಯಲ್ಲಿ ಗೆದ್ದರು. ಯತೀಂದ್ರ ವರುಣದಿಂದ ಆಯ್ಕೆಯಾದರು. ಆ ಮೂಲಕ ಮೈಸೂರು ಮೂಲದ ತಂದೆ- ಮಗ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದರು. ಆದರೆ ಅವರು ಬೇರೆ ಬೇರೆ ಜಿಲ್ಲೆಗಳಿಂದ ಚುನಾಯಿತರಾಗಿದ್ದರು, ಆದರೆ ಇವರಿಬ್ಬರು ಒಂದೇ ಜಿಲ್ಲೆಯಿಂದ ಆಯ್ಕೆ ಆಗಿರುವುದು ವಿಶೇಷ.
ಈ ಬಾರಿ ಮಾಜಿ ಸಚಿವ, ಹಾಲಿ ಶಾಸಕ ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ, ಅವರ ಪುತ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್ಗೌಡ ಹುಣಸೂರಿನಿಂದ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಹುಣಸೂರಿನಿಂದ 1998ರ ಉಪ ಚುನಾವಣೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, 1999 ಹಾಗೂ 2008ರ ಚುನಾವಣೆಯಲ್ಲಿ ಸೋತವರು. ಚಾಮುಂಡೇಶ್ವರಿಯಿಂದ 2013, 2018 ರಲ್ಲಿ ಗೆದ್ದವರು. 2006 ರಲ್ಲಿ ಜೆಡಿಎಸ್- ಬಿಜೆಪಿ, 2018 ರಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿಯನ್ನು ನಿರ್ವಹಿಸಿದರು.
2010ರಲ್ಲಿ ಹರೀಶ್ ಗೌಡ ಅವರ ತಾಯಿ ಹನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ತಾಯಿಯ ಗೆಲುವಿಗೆ ಶ್ರಮಿಸಿದ್ದರು. ಹುಣಸೂರು ಕಸಬಾ ಸೊಸೈಟಿಯಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗೆ ನಿರ್ದೇಶಕರಾಗಿ ನೇಮಕವಾಗುವ ಮೂಲಕ 2013ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ನಂತರ ಮುಂದಿನ ಐದು ವರ್ಷಗಳಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಹಕಾರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಆ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು. ಮುಂದೆ 2018ರ ವೇಳೆಗೆ ಜಿಲ್ಲಾ ಬ್ಯಾಂಕ್ಗೆ ತಮ್ಮವರನ್ನು ಬಹುಮತದಿಂದ ಗೆಲ್ಲಿಸಿಕೊಂಡು ಬ್ಯಾಂಕಿನ ಅಧ್ಯಕ್ಷರಾದರು. ಅಲ್ಲಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದರು. ಅಷ್ಟು ಚಿಕ್ಕವಯಸ್ಸಿನಲ್ಲಿ ಅಪೆಕ್ಸ್ ಬ್ಯಾಂಕಿಗೆ ಯಾರೂ ನಿರ್ದೇಶಕರಾದ ಉದಾರಹಣೆಯೂ ಇಲ್ಲ. ಅಷ್ಟು ವಯಸ್ಸಿನಲ್ಲಿ ಇವರು ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾಗಿ ನೇಮಕಗೊಂಡರು.
ತಂದೆಯ ಸೋಲಿನ ಸೇಡು
2008ರಲ್ಲಿ ಜಿ.ಟಿ.ದೇವೇಗೌಡ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ. ಮಂಜುನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ. ಆ ಚುನಾವಣೆಯಲ್ಲಿ ಸೋಲು ಕಂಡ ದೇವೇಗೌಡರು ಬೇಸರಗೊಂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಈಗ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ನ ಎಚ್.ಪಿ. ಮಂಜುನಾಥ್ ಅವರನ್ನು ಸೋಲುಸಿ, ಗೆಲುವು ದಾಖಲಿಸುವ ಮೂಲಕ ತನ್ನ ತಂದೆಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ.
15 ವರ್ಷದ ನಂತರ ಜಾ.ದಳದ ತೆಕ್ಕೆಗೆ ಹುಣಸೂರು ಕ್ಷೇತ್ರವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ನನ್ನ ಆದ್ಯ ಕರ್ತವ್ಯ. ನಮ್ಮ ತಂದೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡರು.