ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 15: ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಯಾರಾಗಬೇಕು ಎಂದು ಪಕ್ಷದೊಳಗೆ ತೀವ್ರ ಚರ್ಚೆ ನಡೆಸಿದ್ದರೆ, ಇತ್ತ ತಮ್ಮ ಸಮುದಾಯದವರೇ ಸಿಎಂ ಆಗಬೇಕು ಎಂದು ಒಕ್ಕಲಿಗ ಮತ್ತು ಲಿಂಗಾಯತ ಸ್ವಾಮೀಜಿಗಳು, ಕುರುಬ ಸಮಾಜದ ಮುಖಂಡರು, ದಲಿತ ಮುಖಂಡರು ಹೊರಗಡೆಯಿಂದ ಒತ್ತಡ ತರುತ್ತಿದ್ದಾರೆ.
ರಾಜ್ಯ ಒಕ್ಕಲಿಗರ ಅಭಿಮಾನಿ ಬಳಗ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ಸಭೆ ನಡೆಸುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದೆ. ಆದ್ದರಿಂದ ಡಿ.ಕೆ. ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಮಾತನಾಡಿ, ಊಹೆಗೂ ಮೀರಿದ ರೀತಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಹಜವಾಗಿ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಶಿವಕುಮಾರ್ ಅವರ ಹುಟ್ಟುಹಬ್ಬ ನಾಳೆ ಇದ್ದು, ಈ ಸಂದರ್ಭದಲ್ಲಿ ಸಹಜವಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ. ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಆ ಪಕ್ಷದ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಅವರು ಹೇಳಿದರು.
ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಡಿ.ಕೆ. ಶಿವಕುಮಾರ್ ಒಬ್ಬ ದೈತ್ಯ ಕೆಲಸ ಗಾರ. ಎಲ್ಲರ ಮಾರ್ಗದರ್ಶನದಲ್ಲಿ ಪಕ್ಷವನ್ನು ಅಧಿಕಾರ ಕ್ಕೆ ತಂದಿದ್ದಾರೆ. ಶಿವಕುಮಾರ್ ಗೆ ಕೊಟ್ಟಷ್ಟು ನೋವು ಯಾರಿಗಾದರೂ ಕೊಟ್ಟಿದ್ದರೆ ಅವರು ಭೂಮಿ ಮೇಲೆ ಇರುತ್ತಿರಲಿಲ್ಲ ಅನ್ನಿಸುತ್ತದೆ ಎಂದು ಹೇಳಿದರು.
ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಕೇಳಲು ಅರ್ಹರಿದ್ದಾರೆ. ನಮ್ಮ ಸಮುದಾಯದ ನಿರ್ಣಯವನ್ನು ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಟ್ಟಿಸಬೇಕು. ಅದಕ್ಕಾಗಿಯೇ ನೂತನ ಶಾಸಕ ಬಾಲಕೃಷ್ಣರನ್ನು ಈ ಸಭೆಗೆ ಕರೆಸಲಾಗಿದೆ. ನಮ್ಮ ನಿರ್ಧಾರವನ್ನು ಅವರು ಶಾಸಕಾಂಗ ಸಭೆಯಲ್ಲಿ ತಿಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕುರುಬರ ಸಂಘದ ಸಭೆ:
ಈ ಮಧ್ಯ ಬೆಂಗಳೂರಿನಲ್ಲಿ ಕುರುಬರ ಸಂಘದ ಸಭೆ ಕರೆಯಲಾಗಿತ್ತು. ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ.