ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 15: ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಬಹುಮತ ಪಡೆದಿರುವ ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿಟ್ಟಿನಲ್ಲಿ ಏಕಮುಖವಾಗಿ ಹೈಕಮಾಂಡ್ನಿಂದಲೇ ನೇರವಾಗಿ ಘೋಷಿಸದೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಭಾನುವಾರ ಮಾಡಲಾಯಿತು. ಆದರೆ, ಅಂತಿಮವಾಗಿ ಎಐಸಿಸಿ ಅಧ್ಯಕ್ಷರೇ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಮಾಡಲಿ ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಯಿತು.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ನಿಂದ ಹೊಸದಾಗಿ ಆಯ್ಕೆಯಾದ ಎಲ್ಲಾ ಶಾಸಕರು ಬಂದು ಮೊದಲ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಮುಖ್ಯಮಂತ್ರಿ ಆಯ್ಕೆಗಾಗಿ ಎಐಸಿಸಿ ಮೂವರು ವೀಕ್ಷಕರನ್ನು ನೇಮಕ ಮಾಡಿದ್ದು, ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಹಾಗೂ ದೀಪಕ್ ಬಬಾರಿಯಾ ಅವರು ವೀಕ್ಷಕರಾಗಿ ಬಂದು ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದರು.
ಇನ್ನು ಸಭೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಜೊತೆ ಪ್ರತ್ಯೇಕ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹ ಹಾಜರಿದ್ದರು. ಇಬ್ಬರು ನಾಯಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.
ಬಳಿಕ ಕಾಂಕಾಂಗ್ರೆಸ್ನಿಂದ ಆಯ್ಕೆಯಾದಂತ 134 ಶಾಸಕರುಗಳು ಸಭೆಯಲ್ಲಿ ತಮ್ಮ ತಮ್ಮ ಪರಿಚಯ ಮಾಡಿಕೊಂಡರು. ಬಳಿಕ ಯಾರು ಮುಖ್ಯಮಂತ್ರಿಯಾದರೆ ಸೂಕ್ತ ಎಂಬ ತಮ್ಮ ಅಭಿಪ್ರಾಯವನ್ನೂ ಸಹ ಹಂಚಿಕೊಂಡಿದ್ದಾರೆ.
ಖರ್ಗೆ ಹೆಗಲಿಗೆ ಜವಾಬ್ದಾರಿ:
ಕಾಂಗ್ರೆಸ್ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ (ಶಾಸಕಾಂಗ ಪಕ್ಷದ ನಾಯಕ) ಯಾರಾಗಬೇಕು ಎಂದು ಆಯ್ಕೆ ಮಾಡುವ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಿರ್ಧರಿಸಿದೆ.
ಅಧಿಕಾರ ಹಂಚಿಕೆಯ ಸೂತ್ರಕ್ಕೆ ಅಥವಾ ಯಾರು ಮುಂದಿನ ಸಿಎಂ ಆಗಬೇಕು ಎಂದು ಮತ ಹಾಕುವುದಕ್ಕೆ ಡಿ.ಕೆ. ಶಿವಕುಮಾರ್ ಒಪ್ಪಲಿಲ್ಲ ಎಂದು ಗೊತ್ತಾಗಿದೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರ ನೇರವಾಗಿ ಹೈಕಮಾಂಡ್ನಿಂದಲೇ ಘೋಷಣೆ ಆಗಬೇಕು ಎಂಬ ಪಟ್ಟು ಹಿಡಿದರು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಕೆಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಬೆಳಗ್ಗೆ ದೆಹಲಿಗೆ ಮರಳಿದ್ದಾರೆ. ಅದಕ್ಕೂ ಮುನ್ನ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯಗಳನ್ನು ಪಡೆದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆರಂಭಿಸಿದ್ದಾರೆ.
ಇಬ್ಬರೂ ನಾಯಕರ ಮನವೊಲಿಸಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಅನಂತರ ಒಂದೆರೆಡು ದಿನದಲ್ಲಿ ಕರ್ನಾಟಕ ಸಚಿವ ಸಂಪುಟದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದು ಬಹುತೇಕ ಸೋಮವಾರ ಘೋಷಣೆಯಾಗುವ ಸಾಧ್ಯತೆ ಇದೆ. ಮೇ 18ರಂದು ಹೊಸ ಸರ್ಕಾರ ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಬಲಿಗ ಶಾಸಕರಿಂದ ಒತ್ತಡ:
ಸದ್ಯ ಕಾಂಗ್ರೆಸ್ನ ಮುಖ್ಯಮಂತ್ರಿ ರೇಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪ್ರಮುಖರಾಗಿದ್ದಾರೆ. ಇಬ್ಬರೂ ಸಹ ತಮ್ಮ ಬೆಂಬಲಿತ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆಗಳನ್ನು ಮಾಡಿದ್ದಾರೆ. ಇಬ್ಬರೂ ನಾಯಕರ ಆಪ್ತರು ತಮ್ಮ ನಾಯಕನೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಲವರು ಬಹಿರಂಗವಾಗಿ ಹೇಳಿಕೆಗಳನ್ನು ಸಹ ನೀಡಿದ್ದಾರೆ.
ಬೆಂಗಳೂರಿನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಿವಾಸಗಳು ರಾಜಕೀಯ ಚಟುವಟಿಕೆಯ ಕೇಂದ್ರಗಳಾಗಿವೆ. ಇಬ್ಬರೂ ನಾಯಕರ ಮನೆ ಸುತ್ತು ಪೊಲೀಸರ ಬಂದೋಬಸ್ತ್ ಒದಗಿಸಲಾಗಿದೆ. ರಾಜ್ಯದ ವಿವಿಧ ಭಾಗಗಳ ಶಾಸಕರು ತಮ್ಮ ತಮ್ಮ ನಾಯಕರನ್ನು ಭೇಟಿ ಮಾಡಿ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಒತ್ತಡ ತಂದಿದ್ದಾರೆ.