ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ. 16: ರಾಜ್ಯ ಮಾದಿಗ ಎಡಗೈ ಸಮುದಾಯದ ಪ್ರಮುಖರಾದ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ವರಿಷ್ಠರಿಗೆ ಕುಷ್ಟಗಿ ತಾಲೂಕು ಮಾದಿಗ ಸಮುದಾಯದವರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಜಾಂಬವ ಯುವಸೇನೆ ತಾಲೂಕಾಧ್ಯಕ್ಷ ಯಮನೂರು ಮೇಲಿನಮನಿ, ಪ್ರಮುಖರಾದ ನಿರುಪಾದಿ ಕಲಿಕೇರಿ, ಹನುಮಂತ ಪೂಜಾರಿ ಇತರರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮುವತ್ತೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸೇವೆಯಲ್ಲಿರುವ ಆರ್.ಬಿ.ತಿಮ್ಮಾಪೂರ ಅವರು ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ವಿವಿಧ ಖಾತೆಗಳ ಸಚಿವ ಸ್ಥಾನ ನಿಭಾಯಿಸಿದ್ದಾರೆ.
ಅಲ್ಲದೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತ ಪಡೆಯುವಲ್ಲಿ ಶ್ರಮಿಸಿದ್ದಾರೆ. ಹಾಗಾಗಿ ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ರಚನೆ ವೇಳೆ ಸಾಮಾಜಿಕ ನ್ಯಾಯದಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಆರ್.ಬಿ.ತಿಮ್ಮಾಪೂರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಹೈಕಮಾಂಡ್ ವರಿಷ್ಠರಿಗೆ ಒತ್ತಾಯಿಸಿದ್ದಾರೆ.