ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ. 17: ತಾಲೂಕಿನ ಗುಮಗೇರಿ ಗ್ರಾಮದಲ್ಲಿ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಅಗ್ನಿಕೊಂಡೋತ್ಸವ ಹಾಗೂ ಅಕ್ಕಿ ಪಾಯಸ ನೈವೇದ್ಯ ಅರ್ಪಣೆ ಕಾರ್ಯಕ್ರಮಗಳು ಬುಧವಾರ ಜರುಗಿದವು.
ಬೆಳಿಗ್ಗೆ ದೇವಸ್ಥಾನದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣ, ಅಕ್ಕಿಪಡಿ, ಪ್ರಸಾದ ವಿತರಣೆ, ಬಾಳೆದಂಡಿಗೆ ಆರೋಹಣ ಇತರೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ನಂತರ ದೇವಸ್ಥಾನದ ಪೂಜಾರಿ ಮನೆತನದವರು ಪ್ರತಿವರ್ಷದಂತೆ ಈ ವರ್ಷವೂ ಅಗ್ನಿಕೊಂಡ ಹಾಯುವ ಮೂಲಕ ಪ್ರಸಕ್ತ ವರ್ಷದ ದೇವಿಯ ಭವಿಷ್ಯ ವಾಣಿ ನುಡಿದರು. ಬಳಿಕ ಕುದಿಯುವ ಅಕ್ಕಿ ಪಾಯಸಕ್ಕೆ ಕೈಹಾಕಿ ದೇವಿಗೆ ನೈವೇದ್ಯ ಅರ್ಪಿಸಿದರು.
ಈ ವೇಳೆ ಗ್ರಾಮದ ಅಸಂಖ್ಯಾತ ಭಕ್ತರು ದೇವಿಯ ಉತ್ಸವದಲ್ಲಿ ಪಾಲ್ಗೊಂಡಿದ್ದರು.