ಬೆಂಗಳೂರು, ಮೇ 18: ಸಮಾಜವಾದಿ ಸಿದ್ದಾಮತವನ್ನು ಮೈಗೂಡಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ಈ ಮಟ್ಟಕ್ಕೆ ಬೆಳೆದಿರುವುದು ರೋಚಕ ತೆಯಾಗಿದೆ. ಅನಕ್ಷರಸ್ಥ ದಂಪತಿ ಪುತ್ರನಾದ ಸಿದ್ದರಾಮಯ್ಯ ಶಾಲೆಗೆ ಹೋಗಲು ಆಗದೆ ಕುರಿ ದನಗಳನ್ನು ಕಾಯ್ದುಕೊಂಡು ಬಾಲ್ಯ ಕಳೆದಿದ್ದ ಈತ ನೇರವಾಗಿ ಐದನೇ ತರಗತಿಗೆ ಸೇರ್ಪಡೆಯಾಗಿ ನಾಳೆ ರಾಜ್ಯದ ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವುದು ಒಂದು ಮೈಲಿಗಲ್ಲು.
ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮ, ಜನನ 1948ರ ಆಗಸ್ಟ್ 12. ಇವರದ್ದು ಕೃಷಿ ಪ್ರಧಾನ ಕುಟುಂಬ.ಅಂದಿನ ಕಾಲದಲ್ಲಿಎಸ್.ಎಸ್.ಎಲ್.ಸಿ. ಪಾಸು ಮಾಡುವುದೇ ಕಠಿಣವಾಗಿತ್ತು.ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರಾದರು.
ಹೋರಾಟದ ಬದುಕು
ನ್ಯಾಯವಾದಿಯಾಗಿ, ಉಪನ್ಯಾಸಕನಾಗಿ ನಂತರ ವಕೀಲ ವೃತ್ತಿ ಆರಂಭಿಸಿದ ಸಿದ್ದರಾಮಯ್ಯ ಅವರ ಮನಸ್ಸು ನ್ಯಾಯಾಲಯದಲ್ಲೇ ಕಳೆದು ಹೋಗಲಿಲ್ಲ. ಶೋಷಿತ ವರ್ಗಗಳ ಪರ ಅವರ ಮನ ಸದಾ ಮಿಡಿಯುತ್ತಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದರು.
ವಿದ್ಯಾರ್ಥಿ, ವಕೀಲ, ಹೋರಾಟಗಾರ ಆಗಿದ್ದಾಗ ಕಷ್ಟ ಸ್ವತಃ ಅನುಭವಿಸಿದ ಇವರು ಮುಂದೆ ರಾಜಕೀಯ ಅಧಿಕಾರ ಪಡೆದಾಗ ಜನರು ಅನುಭವಿಸುವ ಕಷ್ಟಗಳನ್ನು ಈಡೇರಿಸಲು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಿದರು.
1980ರಲ್ಲಿ ಸಿದ್ದರಾಮಯ್ಯ ಅವರು ಮೊದಲಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯನವರು 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಜಯಗಳಿಸಿದರು.
1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಸಿದ್ದರಾಮಯ್ಯ ಅವರು ಜನತಾಪಕ್ಷದಿಂದ ಎರಡನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಸಚಿವರಾದರು. ಎಸ್.ಆರ್ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಸಿದ್ದರಾಮಯ್ಯ ಅವರು ಆಗ ಜನರಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಹ ಸೋಲು ಕಂಡರು. ಅದು ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ತುಸು ಹಿನ್ನಡೆಯ ಕಾಲ.
ರಾಜಕೀಯ ತಿರುವು
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಹಿಂದ ಸಂಘಟನೆಗೆ ಮುಂದಾದ ಸಿದ್ದರಾಮಯ್ಯ ದೇವೇಗೌಡರ ಕೆಂಗಣ್ಣಿಗೆ ಗುರಿಯಾದರೂ ಅದನ್ನು ಲೆಕ್ಕಿಸದೆ ಅಹಿಂದ ಸಂಘಟನೆ ನಡೆಸಿ ಸಮಾವೇಶ ನಡೆಸಿದ ಮೂಲಕ ಪಕ್ಷದಿಂದ ಉಚ್ಛಾಟನೆ ಒಳಗಾದರು. ಬಳಿಕ ಅವರು ಕಾಂಗ್ರೆಸ್ ಸೇರಿ ವರುಣಾದಿಂದ ಜಯಗಳಿಸುವ ಮೂಲಕ ಪುನಃ ತಮ್ಮ ರಾಜಕೀಯ ಪುನರ್ಜನ್ಮ ಕಂಡುಕೊಂಡರು.
ಪ್ರತಿಪಕ್ಷದ ನಾಯಕರಾಗಿ ಅವರು ಬಳ್ಳಾರಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿ ಹೊಸ ಸಂಚಲನ ಮೂಡಿಸಿದ ಅವರು 2013ರ ಅವರ ನೇತೃತ್ವದಲ್ಲಿ ಚುನಾವಣೆಯಲ್ಲಿ ಬಹುಮತ ಬಂದಾಗ ಅವರು ಮುಖ್ಯಮಂತ್ರಿ ಆದರು.
2013ರ ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಲ ಮನ್ನಾ ಮಾಡುವುದರ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳಾದ ಹಲವು ಭಾಗಗಳ ಧಾತರಾದರು.
ಮೊದಲ ಆದೇಶ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು ಆಗಲೇ ಡಿದಂತೆ’ನಡೆಯಬೇಕು’’ ಎಂಬ ಸಂಕಲ್ಪವನ್ನು ಮಾಡಿಬಿಟ್ಟಿದ್ದರು. ಚುನಾವಣಾ ಕಾಲದಲ್ಲಿ ಪಕ್ಷ ಪ್ರಕಟಿಸುವ ಪ್ರಣಾಳಿಕೆ ಕೇವಲ ಕಾಗದಗಳ ಕಂತೆಯಾಗಿ ಕಳೆದುಹೋಗಲು ಬಿಡಬಾರದು, ಅದು ಅಧಿಕಾರದ ದಿನಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಅವರು ನರ್ಧರಿಸಿದ್ದರು. ಅದರ ಫಲವಾಗಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಲ ಮನ್ನಾ, ಕಾರ್ಯಕ್ರಮಗಳನ್ನು ಘೋಷಿಸಿದರು.
ತಮ್ಮ ಆಡಳಿತಾವಧಿಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 60ನ್ನು ತಮ್ಮ ಮೊದಲ ಬಜೆಟ್ನಲ್ಲಿಯೇ ಈಡೇರಿಸಿದರು. ಎರಡನೇ ಬಜೆಟ್ನಲ್ಲಿ ಪ್ರಣಾಳಿಕೆಯಲ್ಲಿನ ಇನ್ನೂ 30 ಭರವಸೆಗಳನ್ನು ಈಡೇರಿಸಿದರು. ಉಳಿದ ಭರವಸೆಗಳನ್ನು ತಮ್ಮ ಕೊನೆಯ ನಾಲ್ಕು ಬಜೆಟ್ ಗಳಲ್ಲಿ ಜಾರಿಗೆ ತಂದು ನುಡಿದಂತೆ ನಡೆದವರು ಎಂಬ ಖ್ಯಾತಿ ಪಡೆದವರು. ಇದು ಶ್ರೀ ಸಿದ್ದರಾಮಯ್ಯನವರ ಜನಪರ ಧೋರಣೆ, ಬಡವರ ಕಲ್ಯಾಣದ ಬಗ್ಗೆ ಬದ್ದತೆ ಮತ್ತು ಪ್ರಾಮಾಣಿಕ ನಡವಳಿಕೆಗೆ ಸಾಕ್ಷಿ. ದಕ್ಷತೆ ಮತ್ತು ಪ್ರಾಮಾಣಿಕತೆ ಸಿದ್ದರಾಮಯ್ಯನವರ ವ್ಯಕ್ತಿತ್ವದ ಹೆಗ್ಗುರುತುಗಳು. ಆದರೆ, ಇವರು ಜನಪರ ಯೋಜನೆಗಳನ್ನು ನೀಡಿದರೂ ಜನರು ಬಹುಮತ ನೀಡಲಿಲ್ಲ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ 2018ರಿಂದ 2023ರ ವರೆಗೆ ಛಲ ಬಿಡದೆ ಬಿಜೆಪಿ ವಿರುದ್ಧ ಹೋರಾಟ ಪುನಃ ಅಧಿಕಾರಕ್ಕೆ ತರಲು ಪ್ರತಿಪಕ್ಷದ ನಾಯಕರಾಗಿ ಹೋರಾಡಿದರು.
ಕೊರೊನಾ ಕಾಲದ ಭ್ರಷ್ಟಾಚಾರ, 40% ಕಮಿಷನ್, ಪೇಸಿಎಂ, ಪಿಎಸ್ ಐ ನೇಮಕಾತಿ ಅಕ್ರಮ, ಅಮುಲ್ –ನಂದಿನಿ ವಿವಾದ ಹೀಗೆ ಒಂದೊಂದು ಹಗರಣಗಳನ್ನು ಊರೂರು ಸುತ್ತಿ ಬಯಲಿಗೆಳೆಯುತ್ತಾ ಬಂದ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ನಿದ್ದೆಗೆಡಿಸಿಬಿಟ್ಟಿದ್ದರು. ಕೇವಲ ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲಿಯೇ ತನ್ನ ಐದು ರ್ಷಗಳ ಆಡಳಿತದ ಸಾಧನೆಗಳನ್ನು ಹೇಳುತ್ತಾ ಜನರಿಗೆ ರ್ಯಾಯವನ್ನು ತೋರಿಸುತ್ತಾ ಬಂದದ್ದು ಸಿದ್ದರಾಮಯ್ಯನವರ ವೈಶಿಷ್ಟೈ. ಸಶಕ್ತ ನಾಯಕ ಮತ್ತು ಸುಭದ್ರ ರ್ಕಾರವನ್ನು ತಮ್ಮಿಂದ ಮಾತ್ರ ಕೊಡಲು ಸಾಧ್ಯ ಎಂದು ಜನತೆಗೆ ಮನವರಿಕೆ ಮಾಡಿಕೊಟ್ಟಿರುವ ಪರಿಣಾಮವೇ ಈ ವಿಧಾನಸಭಾ ಚುನಾವಣೆಯ ಫಲಿತಾಂಶ.
ಕುಟುಂಬ ಪರಿಚಯ:
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಗೃಹಿಣಿ. ಮತ್ತು ಪುತ್ರ ಡಾ. ಎಸ್ ಯತೀಂದ್ರ ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನಾಲ್ಕು ದಶಕಗಳ ಕಾಲ ರಾಜಕೀಯದಲ್ಲಿ ಇದ್ದರೂ ಹಳ್ಳಿ ಸೊಗಡನ್ನು ಎಂದೂ ಬಿಡದ ಇವರು ರಾಜ್ಯದ ಅಹಿಂದ ನಾಯಕರಷ್ಟೇ ಅಲ್ಲ, ಸರ್ವ ಜನಾಂಗದ ನಾಯಕರು ಎಂಬುದಕ್ಕೆ ಇದವರು ದಾವಣಗೆರೆಯಲ್ಲಿ ಆಚರಿಸಿಕೊಂಡ 75ನೇ ಹುಟ್ಟುಹಬ್ಬಕ್ಕೆ ಬಂದ ಜನಸಾಗರವೇ ಸಾಕ್ಷಿ.
ಮುಖ್ಯಮಂತ್ರಿಯಾದರೂ ಪ್ರತಿ ವರ್ಷ ತಮ್ಮೂರ ಜಾತ್ರೆಗೆ ತೆರಳಿ ತಮ್ಮ ಊರಿನವರೊಂದಿಗೆ ವೀರಗಾಸೆ ಕುಣಿಯುವುದನ್ನು ಬಿಟ್ಟಿಲ್ಲ. ಹೀಗೆ ತಮ್ಮ ರಾಜಕೀಯ, ಸಾಮಾಜಿಕ, ಗ್ರಾಮೀಣ ಸೊಗಡಿನೊಂದಿಗೆ ಏಳೂವರೆ ದಶಕಲಗಳ ಕಾಲ ಜೀವನ ಸವಿದ ಸಿದ್ದರಾಮಯ್ಯ ಈಗ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ.
ರಾಜ್ಯದಲ್ಲಿ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಬಳಿಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾದವರ ಸಾಲಿಗೆ ಸಿದ್ದರಾಮಯ್ಯ ಸೇರುತ್ತಿದ್ದಾರೆ.