ಸುದ್ದಿಮೂಲ ವಾರ್ತೆ
ಮಾಲೂರು, ಮೇ 18: ಫ್ರಂಟ್ ಲೈನ್ ಲೀಡರ್ಗಳಿಂದ ಮತಗಳು ಹಿಂದೆ ಹೋಯಿತೇ ವಿನಃ ಸಾಮಾನ್ಯ
ಕಾರ್ಯಕರ್ತನಿಂದ ಮತಗಳು ಕಡಿಮೆಯಾಗಿಲ್ಲ. ಇನ್ನು ಮುಂದೆ ಆರೀತಿ ಆಗದಂತೆ ಜಾಗೃತರಾಗೋಣ. ನನ್ನ ಎರಡನೇ ಬಾರಿಗೆ ಶಾಸಕನನ್ನಾಗಿ ಆಯ್ಕೆ ಮಾಡಿದ ತಾಲೂಕಿನ ಎಲ್ಲಾ ಜನತೆಯ ಋಣ ಅಭಿವೃದ್ಧಿ ಮಾಡುವ ಮೂಲಕ ತೀರಿಸುವೆ ಎಂದು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
ಪಟ್ಟಣದ ವಿಶ್ವನಾಥ ಕನ್ವೆನ್ಷನ್ ಹಾಲ್ನಲ್ಲಿ ಮಾಲೂರು ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿಗೆ ಜಯಗಳಿಸಿದ
ಶಾಸಕ ಕೆ.ವೈ. ನಂಜೇಗೌಡರಿಗೆ ಅಭಿನಂದನೆಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಎರಡನೇ ಬಾರಿಗೆ ಚುನಾವಣೆಯಲ್ಲಿ ಶಾಸಕರಾಗಲು ಅವಕಾಶ ಕಲ್ಪಿಸಿದ ತಾಲೂಕಿನ ಜನತೆಯ ಆಶೀರ್ವಾದ
ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ನನ್ನ ಕುಟುಂಬವೇ ತಾಲೂಕಿನ ಅಭಿವೃದ್ಧಿಗೆ ಮೀಸಲಿಟ್ಟಿದ್ದು ಮೊದಲನೇ ಅವಧಿಗೆ ಶಾಸಕರಾಗಿದ್ದ ವೇಳೆ ಮಧ್ಯಮ ವರ್ಗದವರು ಬಡವರ್ಗದವರ ಆರೋಗ್ಯಕ್ಕಾಗಿ ಆಸ್ಪತ್ರೆ ಅವರ ಮಕ್ಕಳ ಶಿಕ್ಷಣಕ್ಕಾಗಿ ದೇವಾಲಯ ಮಸೀದಿ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ್ದೇನೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪುರಸಭೆ ಅಧ್ಯಕ್ಷರುಗಳು ಸದಸ್ಯರುಗಳು ಇರುವ ಕಡೆ ಚುನಾವಣೆಯಲ್ಲಿ ಮತಗಳಿಕೆಯಲ್ಲಿ ಕಡಿಮೆ ಬಂದಿದೆ. ಗೆಲುವಿನ ಅಂತರ ಕಡಿಮೆ ಇರಬಹುದು. ಅದು ಗೆಲುವೇ. ಕಾರ್ಯಕರ್ತರು ತಾಲೂಕಿನ ಯಾವ ಮತಗಟ್ಟೆಯಲ್ಲಿ ಮತಗಳು ಕಡಿಮೆ ಬಂದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಮುಂಬರುವ ಚುನಾವಣೆ ವೇಳೆಗೆ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು ಮುಂದಿನ ದಿನಗಳಲ್ಲಿ ಮಾಡಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಸರ್ಕಾರದಿಂದ ಹೆಚ್ಚುವರಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವ ಮೂಲಕ ತಾಲೂಕಿಗೆ ಒಳ್ಳೆಯ ಅಧಿಕಾರಿಗಳನ್ನು ಹಾಕಿಸಿಕೊಂಡು ಬಂದು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗುವುದು. ಅದೃಷ್ಟ ಇದ್ದರೆ ಸಚಿವನಾಗುತ್ತೇನೆ. ಅಧಿಕಾರದ ಆಸೆ ನನಗಿಲ್ಲ. ರಾಜ್ಯದಲ್ಲಿ ಮಾದರಿ ತಾಲೂಕು ಮಾಡುವುದೇ ನನ್ನ ಗುರಿ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಅನುದಾನಗಳನ್ನು ಪುರಸಭೆಗೆ ತರಲಾಗಿತ್ತು. ಬಿಜೆಪಿಯ ಸರ್ಕಾರ ಸಂಸದ ಎಸ್ ಮುನಿಸ್ವಾಮಿ ಕುಮ್ಮಕ್ಕಿನಿಂದ ಅನುದಾನವನ್ನು ವಾಪಸ್ ಪಡೆದಿದೆ. ಈಗಿನ ನಮ್ಮ ಸರ್ಕಾರದಿಂದ ಪಟ್ಟಣದ ಅಭಿವೃದ್ಧಿಗೆ 50 ಕೋಟಿ ರೂಗಳು ತಾಲೂಕಿಗೆ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ ಎನ್ ಅನಿಲ್ ಕುಮಾರ್, ಮಾಜಿ ಶಾಸಕ ಎ ನಾಗರಾಜು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ ಲಕ್ಷ್ಮಿ ನಾರಾಯಣ್, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ ಮಾತನಾಡಿದರು.