ಸುದ್ದಿಮೂಲವಾರ್ತೆ
ಕೊಪ್ಪಳ ಮೇ 19 : ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆಯ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ ಕುಕನೂರಿನ ವಿದ್ಯಾಶ್ರೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಎಸ್.ಎಫ್.ಎಸ್ ಪ್ರೌಢಶಾಲೆ ಹಾಗೂ ಲಾಯಿನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಗಂಗಾವತಿಯ ಬೇಥಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಭಾಗ್ಯನಗರದ ಜ್ಞಾನಬಂಧು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕುಷ್ಟಗಿಯ ವಿಜಯ ಚಂದ್ರಶೇಖರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಅವಕಾಶ ಕಲ್ಪಿಸಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ತಹಶೀಲ್ದಾರರವರಿಂದ ಪಡೆದ ಆರ್.ಡಿ ಸಂಖ್ಯೆ ಹೊಂದಿರುವ ಚಾಲ್ತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ರೂ 2.50 ಲಕ್ಷದೊಳಗಿರಬೇಕು. ವಿದ್ಯಾರ್ಥಿಯು 2022-23ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಶೇ. 60 ಅಂಕ ಪಡೆದಿರಬೇಕು. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಬಾಲಕಿಯರಿಗೆ ಶೇ.50 ರಷ್ಟು ಮೀಸಲಾತಿಯನ್ನು ನೀಡಲಾಗುವುದು. ಅರ್ಜಿ ನಮೂನೆಯಲ್ಲಿ ನಮೂದಿಸಿದ 15 ವಿಧದ ವಿಶೇಷ ವರ್ಗಕ್ಕೆ ಸೇರಿದ ಮಕ್ಕಳಿಗೆ ಮೊದಲನೇ ಆದ್ಯತೆ ನೀಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇರುವುದಿಲ್ಲ.
ಅರ್ಜಿ ಸಲ್ಲಿಸುವ ಮೇ 26 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಗಂಗಾವತಿ ಮತ್ತು ಕುಷ್ಟಗಿ ಇವರಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳವರನ್ನು ಸಂಪರ್ಕಿಸುವುದಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚಿದಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Application Invitation for School Admission