ಸುದ್ದಿಮೂಲ ವಾರ್ತೆ
ಕುಷ್ಟಗಿ ಮೇ, 19: ಸ್ಥಳೀಯ ಸಂಸ್ಥೆಯ ಎಸ್’ಎಫ್’ಸಿ ವಿಶೇಷ ಅನುದಾನದಡಿ 4 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕುಷ್ಟಗಿ ಪಟ್ಟಣದೊಳಗಿನ ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಸುಮಾರು ಎಂಟು ತಿಂಗಳು ಹಿಂದೆ ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಪುರಸಭೆ ವರೆಗೆ ಹಾಗೂ ಬಸವೇಶ್ವರ ವೃತ್ತದಿಂದ ಮಾರುತಿ ವೃತ್ತ ಹಾಗೂ ಕನಕದಾಸ ವೃತ್ತ ಮಾರ್ಗವಾಗಿ ಸಂದೀಪ ನಗರ ರಸ್ತೆ ವರೆಗೆ ಡಿವೈಡರ್, ಫುಟ್ಪಾತ್ ಸೇರಿದಂತೆ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ ಅಂದಾಜು ಪಟ್ಟಿಯಲ್ಲಿದೆ.
ಆದರೆ, ರಸ್ತೆ ಅಗಲೀಕರಣ, ಡಾಂಬರೀಕರಣ ಹಾಗೂ ಡಿವೈಡರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಎರಡು ಬದಿಯ ಫುಟ್ಪಾತ್ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ. ಆದರೆ ಫುಟ್ಪಾತ್ ನಿರ್ಮಾಣಕ್ಕಾಗಿ ಬೇಕಾಗಿರುವ ಅಗತ್ಯ ಸಾಮಾಗ್ರಿ ರಸ್ತೆ ಬದಿಯಲ್ಲಿ ಇರಿಸಿ ತಿಂಗಳು ಗತಿಸಿದೆ. ಇದರಿಂದ ಬೈಕ್ ಸವಾರರಿಗೆ ಹಾಗೂ ಅಂಗಡಿಕಾರರಿಗೆ ತುಂಬಾ ತೊಂದರೆ ತಂದೊಡ್ಡಿದೆ. ಇದೇ ಮಾರ್ಗದಲ್ಲಿ ಹುಬ್ಬಳ್ಳಿ ವ ಹೈದರಾಬಾದ್’ಗೆ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿ ಬರುವುದರಿಂದ ಇಲ್ಲಿ ಭಾರಿ ವಾಹನಗಳ ಓಡಾಟ ಹೆಚ್ಚು. ಅಪಘಾತಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಎಂಬಂತಾಗಿದೆ.
ರಸ್ತೆ ಕಾಮಗಾರಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ಕಾಮಗಾರಿ ನಿರ್ವಹಣೆ ಹೊಣೆಹೊತ್ತ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಬೇಕಿತ್ತು. ನಿರ್ಲಕ್ಷಿಸಿದ್ದಕ್ಕೆ ಸಂಪಟ್ಟಣದ ಜನತೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಕಾಮಗಾರಿ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.