ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 20: ತಾಲೂಕು ಕನ್ನಡ ಸಂಘದ ಅಧ್ಯಕ್ಷರಾಗಿ ಪ್ರಸನ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ತಾಲೂಕು ಕನ್ನಡ ಸಂಘದ ಅಧ್ಯಕ್ಷರಾಗಿದ್ದ ಎನ್. ಆರ್.ವಿಜಯಶಂಕರ್ ಕಳೆದ ಮಾರ್ಚ್ 19 ರಂದು ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಪ್ರಸನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಸನ್ನ ಕುಮಾರ್ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಚಿರಋಣಿಯಾಗಿದ್ದೇನೆ. ಅಕಾಲಿಕ ಮರಣಕ್ಕೆ ತುತ್ತಾದ ಎನ್.ಆರ್.ವಿಜಯಶಂಕರ್ ರವರ ಕನಸಾಗಿದ್ದ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಎಲ್ಲರ ನೆರವು ಮತ್ತು ಸಹಕಾರದೊಂದಿಗೆ ಇದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಕನ್ನಡವನ್ನು ಉಳಿಸಿ- ಬೆಳೆಸಿ:
ಕೆಜಿಎಫ್ ತಾಲೂಕಿನದ್ಯಂತ ಕನ್ನಡ ಭಾಷೆ. ನೆಲ, ಜಲ, ಸಂಸ್ಕೃತಿಯ ಬೆಳವಣಿಗೆಗೆ ಮತ್ತು ಪ್ರಚಾರಕ್ಕೆ ಶ್ರಮ ವಹಿಸುವುದಾಗಿ ತಿಳಿಸಿದರು. ಗಡಿ ಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್ .ತ್ಯಾಗರಾಜ್, ಪ್ರಧಾನ ಕಾರ್ಯದರ್ಶಿ ಅಶ್ವಥ್, ಜಂಟಿ ಕಾರ್ಯದರ್ಶಿ ರಾಧಾ ಪ್ರಕಾಶ್, ಖಜಾಂಚಿ ರಾಮಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಕೋಗಿಲಹಳ್ಳಿ ಕೃಷ್ಣಪ್ಪ, ಶೇಖರಪ್ಪ, ಲಕ್ಷ್ಮಣ್ ಕುಮಾರ್, ಶಿವಣ್ಣ ಇದ್ದರು.