ಸುದ್ದಿಮೂಲ ವಾರ್ತೆ
ಯಾದಗಿರಿ; ಮೇ, 20: ಬಿಸಿಲಿನ ತಾಪ ಹೆಚ್ಚಳದ ಪರಿಣಾಮದಿಂದ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಮತ್ತು ಪಶುಪಕ್ಷಿ ಸಂಕುಲದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೇಸಿಗೆಯ ಬಿಸಿಗಾಳಿ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಸಿದ್ದತೆ ಕ್ರಮಗಳ ಕುರಿತಂತೆ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜೂಮ್ ಮೀಟಿಂಗ್ ಮೂಲಕ ( ಗೂಗಲ್ ಮೀಟಿಂಗ್) ಸಭೆ ನಡೆಸಿ ಅವರು ಮಾತನಾಡಿದರು.
ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಪರಿಣಾಮ ಸಾರ್ವಜನಿಕರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಉಷ್ಣತೆ ಅಧಿಕವಾಗಿರುವ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಶ್ರಮದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಸಾರ್ವಜನಿಕ ಎಚ್ಚರ ವಹಿಸಬೇಕು. ನಿಂಬೆ ನೀರು, ಮಜ್ಜಿಗೆ ಇನ್ನಿತರ ಮನೆಯಲ್ಲಿಯೇ ತಯಾರಿಸಿದ ಪಾನೀಯ ಮತ್ತು ಓ ಆರ್.ಎಸ್ ಬಳಸಿಕೊಳ್ಳಿ. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ, ಹ್ಯಾಂಡ್ ಟವೆಲ್ ಒಟ್ಟಿನಲ್ಲಿ ಬಿಸಿಗಾಳಿಯನ್ನು ತಡೆಗಟ್ಟುವ ಕಿಟ್ ಗಳನ್ನು ಬಳಸಲು ಪ್ರೋತ್ಸಾಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಉಷ್ಣಾಂಶದಲ್ಲಿ ಹೆಚ್ಚಳ ಹಾಗೂ ತೀವ್ರತರದ ಬಿಸಿಗಾಳಿಯ ಗರಿಷ್ಠ ತಾಪಮಾನ ಮುಂದುವರೆದಿದ್ದು ಇದರಿಂದಾಗಿ ಜನವಸತಿ ಪ್ರದೇಶದಲ್ಲಿ, ಜಾನುವಾರುಗಳಿಗೆ, ಪಶುಪಕ್ಷಿಗಳಿಗೆ ಸಂಭವಿಸಬಹುದಾದ ದುಷ್ಪರಿಣಾಮ ತಪ್ಪಿಸಲು ಮುನ್ನೆಚ್ಚರಿಕೆ ಹಾಗೂ ಸಿದ್ದತೆಗಳ ಕೈಗೊಳ್ಳಲು ತೀವ್ರ ದಣಿವು ಮತ್ತು ಆರೋಗ್ಯ ಏರುಪೇರು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಜಿಲ್ಲಾಡಳಿತ ಸಹಾಯವಾಣಿ 08473-253950 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೆಟ್ಟಿರುವ ಘಟಕಗಳನ್ನು ತಕ್ಷಣ ರಿಪೇರಿ ಮಾಡಿಸಿ ಗ್ರಾಮ ಪಂಚಾಯ್ತಿಗಳಿಗೆ ವಹಿಸಬೇಕು. ಗ್ರಾಮ ಪಂಚಾಯ್ತಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿವೆಯೆ ಎಂಬ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಓ ರವರು ಗಮನಹರಿಸಬೇಕು. ನರೇಗಾ ಕೂಲಿಗಾರರು ಸಮಯ ಬದಲಿಸಿಕೊಂಡು ಬೆಳಿಗ್ಗೆ ಮತ್ತು ಸಾಯಂಕಾಲ ಕೆಲಸ ಮಾಡುವಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಲ ಸಂರಕ್ಷಣೆಯ ಕುರಿತು ಗ್ರಾಮ, ತಾಲೂಕು ಹಾಗೂ ನಗರಗಳಲ್ಲಿ ಜಾಗೃತಿ ಮೂಡಿಸಿ ಅನವಶ್ಯಕವಾಗಿ ನೀರನ್ನು ಪೋಲು ಮಾಡದಂತೆ ನಿಗಾವಹಿಸಿ ಮತ್ತು ತಾಪ ಕಡಿಮೆ ಮಾಡಲು ನೀರನ್ನು ರಸ್ತೆಗಳಿಗೆ ಸಿಂಪಡನೆ ಮಾಡಿ, ಪ್ರಮುಖ ಸ್ಥಳಗಳಲ್ಲಿ ತಾತ್ಕಾಲಿಕ ನೆರಳಿನ ಪ್ರದೇಶಗಳನ್ನು ನಿರ್ಮಿಸಲು ಸಲಹೆ ನೀಡಿದರು.
ಸುಡು ಬಿಸಿಲಿನ ಸಮಸ್ಯೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಜನರು ಬರುವುದರಿಂದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಾಗದಂತೆ
ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.