ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 20: ಕರ್ನಾಟಕದ ಮೂವತ್ತೊಂದನೇ ಮುಖ್ಯಮಂತ್ರಿಯಾಗಿ ಸಿದ್ದರಾಮನ ಹುಂಡಿಯ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿಸುವ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶನದ ವೇದಿಕೆಯಾಯಿತು.
ಕರ್ನಾಟಕದ ಮೂವತ್ತೊಂದನೇ ಮುಖ್ಯಮಂತ್ರಿಯಾಗಿ ಸಿದ್ದರಾಮನ ಹುಂಡಿಯ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ಅವರ ಎರಡನೇಯ ಅಧಿಕಾರ ಯುಗ ಆರಂಭ ಮಾಡಿದರು. ಕಾಂಗ್ರೆಸ್ ಸರ್ಕಾರ ರಚನೆಯ ಕಾರ್ಯಕ್ರಮಕ್ಕೆ ಬಿಜೆಪಿ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರುಗಳು, ಉಪಮುಖ್ಯಮಂತ್ರಿಗಳು, ಸಂಸದರು ಪಕ್ಷಾತೀತಾಗಿ ಪಾಲ್ಗೊಳ್ಳುವ ಮೂಲಕ ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಭಗೇಲ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಪಾಂಡಿಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್ಸಿಪಿ ನಾಯಕ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಮಹೆಬೂಬಾ ಮುಫ್ತಿ, ಸಿಪಿಎಂನ ಸೀತಾರಾಂ ಯಚೂರಿ, ಸಿಪಿಐನ ಡಿ. ರಾಜಾ, ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಸಹಿತ ಹಲವು ಪ್ರಮುಖ ನಾಯಕರು ಬಂದು ಬಲ ಪ್ರದರ್ಶನ ಮಾಡಿದರು.
ಇದು ಕೇವಲ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ರಚನೆಗೆ ಬೆಂಬಲ ಮಾತ್ರ ಅಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಈಗಿನಿಂದಲೇ ವೇದಿಕೆ ಸಜ್ಜು ಮಾಡಿಕೊಂಡಂತೆ ಈ ಮುಖಂಡರ ಭಾಗವಹಿಸುವಿಕೆ ಸಾಕ್ಷೀಕರಿಸಿತು. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಗೆಲವು ಮತ್ತು ಮೋದಿ, ಅಮಿತ್ ಶಾ ನೇರವಾಗಿ ಪ್ರಭಾವ ಬೀರಿದರೂ ಸಹ ಬಿಜೆಪಿ ಹೀನಾಯವಾಗಿ ಸೋತಿರುವುದು ದೇಶಕ್ಕೆ ಇದು ಮುನ್ನುಡಿ ಎಂಬ ಸಂದೇಶವನ್ನು ಹಲವು ನಾಯಕರು ಬೀರಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಸಿಕ್ಕ ಪ್ರಚಂಡ ಗೆಲುವು ಹಲವು ನಾಯಕರಲ್ಲಿ ಹುಮ್ಮಸ್ಸು ಮೂಡಿಸಿದ್ದು, ಇದು ಬರುವ ರಾಷ್ಟ್ರ ರಾಜಕಾರಣದಲ್ಲಿ ಹೊಸ ತಿರುವಿಗೆ ಕಾರಣವಾಗಲಿದೆ ಎಂಬ ಸಂದೇಶ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಅವರು ಮಾತನಾಡಿ, ಬಿಜೆಪಿ ರಾಷ್ಟ್ರದಲ್ಲಿ ನಡೆಸುತ್ತಿರುವ ದುರಾಡಳಿತದ ಬಗ್ಗೆ ಟೀಕಿಸಿ, ಬರುವ ದಿನಗಳಲ್ಲಿ ಎಲ್ಲಾ ಪಕ್ಷಗಳು ಕಾಂಗ್ರೆಸ್ ಜೊತೆ ಎಲ್ಲಾ ಪಕ್ಷಗಳು ಒಂದಾಗಬೇಕು ಎಂಬ ಪರೋಕ್ಷ ಸಂದೇಶವನ್ನು ನೀಡಿದರು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸದಸ್ಯರ ಪ್ರಮಾಣ ವಚನ ಸಮಾರಂಭ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗದೆ ಬರುವ ದಿನಗಳಲ್ಲಿ ಬಿಜೆಪಿಯನ್ನು ಹಣಿಯಲು ಬೇಕಾದ ರಣ ತಂತ್ರವನ್ನು ರೂಪಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು.