ಸುದ್ದಿಮೂಲ ವಾರ್ತೆ
ಕಲಬುರಗಿ, ಮೇ.20 : ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಎಂಟು ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಜಿಲ್ಲೆಯಿಂದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹೊಸ ಸರಕಾರದ ಸಚಿವ ಸಂಪುಟದ ಮೊದಲ ಹಂತದಲ್ಲಿ ಎಂಟು ಜನ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಿಂದ ಶಾಸಕ ಪ್ರಿಯಾಂಕ್ ಖರ್ಗೆ ಒಬ್ಬರೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿರುವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದರು. 2016ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು, 2018 ಸಮಿಶ್ರ ಸರಕಾರ ಹಾಗೂ ಇದೀಗ 2023ರ ಕಾಂಗ್ರೆಸ್ ಸರಕಾರದಲ್ಲಿ ಮೂರನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಜರ್ನಿ :
ಪೂರ್ಣ ಹೆಸರು: ಪ್ರಿಯಾಂಕ್ ಎಂ. ಖರ್ಗೆ.
ಜನನ : ನವೆಂಬರ್ 22, 1978.
ಸ್ಥಳ: ಬೆಂಗಳೂರು.
ವಿದ್ಯಾಬ್ಯಾಸ : ಡಿಪ್ಲೋಮಾ ಇನ್ ಗ್ರಾಫಿಕ್ಸ್ ಮತ್ತು ಎನಿಮೇಷನ್.
ವೃತ್ತಿ : ದೇಶ ಹಾಗೂ ವಿದೇಶ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ.
ಹಾಲಿ ವಾಸ: ಕಲಬುರಗಿ.
ಪಕ್ಷ: ಕಾಂಗ್ರೆಸ್.
ಮದುವೆ: ಶೃತಿ ಖರ್ಗೆ
ಮಕ್ಕಳು: ಅಮಿತವ್ ಹಾಗೂ ಆಕಾಂಕ್ಷ್.
ಶಾಸಕರಾಗಿ ಆಯ್ಕೆ: 2013, 2018 ಹಾಗೂ 2023.
ಮತಗಳ ಅಂತರ : 13640 ಮತಗಳು.
ಮೊದಲಬಾರಿ ಸಚಿವ: 38 ನೇ ವರ್ಷ ವಯಸ್ಸಿನಲ್ಲಿ 2016 ರಲ್ಲಿ ಅಂದಿನ ಸಿಎಂ ಸಿದ್ದ ರಾಮಯ್ಯ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಸೇವೆ
ಎರಡನೆಯ ಬಾರಿ ಸಚಿವ: ಅಂದಿನ ಸಿಎಂ ಎಚ್ ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 2018 ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ.
ರಾಜಕೀಯ ಪ್ರವೇಶ: 1998 ರಲ್ಲಿ ಎನ್ ಎಸ್ ಯು ಐ ನ ಸದಸ್ಯರಾಗಿ ರಾಜಕೀಯ ಪ್ರವೇಶ.
2001-2005 ಎನ್ ಎಸ್ ಯು ಐ ಕಾಲೇಜ್ ಪ್ರಧಾನ ಕಾರ್ಯದರ್ಶಿ.
2005-2007 ರಾಜ್ಯ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ.
2007-2011 ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ.
2011-2014 ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಂತರ ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷ ರಾಗಿ ನೇಮಕ.
ಮೊದಲ ಬಾರಿ ಅಸೆಂಬ್ಲಿಗೆ ಸ್ಪರ್ಧೆ: 2009 ರ ಉಪಚುನಾವಣೆಯಲ್ಲಿ ಚಿತ್ತಾಪುರ ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ, ಸೋಲು.
ಮೊದಲ ಬಾರಿ ಗೆಲುವು : 2013 ರಲ್ಲಿ ಚಿತ್ತಾಪುರ ಕ್ಷೇತ್ರದಿಂದ ಆಯ್ಕೆ.
ಎರಡನೆಯ ಬಾರಿ ಗೆಲುವು: 2018 ರಲ್ಲಿ ಚಿತ್ತಾಪುರ ದಿಂದ ಆಯ್ಕೆ.
ಮೂರನೆಯ ಬಾರಿ ಗೆಲುವು: 2023 ರಲ್ಲಿ ಚಿತ್ತಾಪುರದಿಂದ ಆಯ್ಕೆ.
ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಜಾರಿಗೆ ತಂದ ಪ್ರಮಖ ಯೋಜನೆಗಳು : ಐರಾವತ, ಪ್ರಬುದ್ಧ, ಪ್ರಗತಿ, ಸಮೃದ್ದಿ ಹಾಗೂ ಉನ್ನತಿ.
ಶೈಕ್ಷಣಿಕ ಸಾಧನೆ : ವಾಡಿ ಹಾಗೂ ಚಿತ್ತಾಪುರದಲ್ಲಿ ಎಜುಕೇಷನ್ ಹಬ್ ನಿರ್ಮಾಣ.
ಬೆಂಗಳೂರಿನಲ್ಲಿ ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಯೂನಿವರ್ಸಿಟಿ ( ಬಿಎಎಸ್ಇ).
ಬಿಎಎಸ್ ಇ ನಲ್ಲಿ ಎರಡು ವರ್ಷ ಕೋ ಚೇರ್ಮನ್ ಆಗಿ ಸೇವೆ.
ಚಿತ್ತಾಪುರ ಕ್ಷೇತ್ರದಲ್ಲಿ ಶೈಕ್ಷಣಿಕ, ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು, ಸಂಪರ್ಕ ರಸ್ತೆ ನಿರ್ಮಾಣ, ಕುಡಿಯುವ ನೀರಿಗೆ ಆದ್ಯತೆ, ಆರೋಗ್ಯ ಕ್ಷೇತ್ರದ ಅಮೂಲಾಗ್ರ ಬಲಾವಣೆ ಹಾಗೂ ಮಳೆಯಾಧಾರಿತ ಜಮೀನುಗಳಿಗೆ ನೀರಾವರಿ ಒದಗಿಸಿರುವುದು ಸೇರಿದಂತೆ ಮುಂತಾದ ಅಭಿವೃದ್ಧಿ ಕೆಲಸಗಳ ಮೂಲಕ ಜನ ಮನ್ನಣೆ ಪಡೆದಿದ್ದರು. ಅಲ್ಲದೇ, ಪಿಎಸ್ಐ ಹಗರಣ, ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ ಯೋಜನೆ ಹಗರಣ ಸೇರಿ ಬಿಜೆಪಿ ಸರಕಾರದಲ್ಲಿನ ಹಗರಣಗಳನ್ನು ಬಯಲಿಗೆಳೆದು, ತಮ್ಮ ಕಾರ್ಯ ವೈಖರಿ ಮೂಲಕ ರಾಜ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.
ಈ ಬಾರಿ ಚಿತ್ತಾಪುರದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರ ಪ್ರಚಾರದ ನಡುವೆಯೂ ಪ್ರಿಯಾಂಕ್ ಅವರ ಜನಪರ, ಜೀವಪರ ಹಾಗೂ ಜಾತ್ಯಾತೀತ ನಿಲುವುಗಳಿಗೆ ಮತದಾರರು ಜೈ ಎಂದಿದ್ದಾರೆ.