ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 20: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಬಿಜೆಪಿ ಅಧಿಕಾರಾವಧಿಯಲ್ಲಿ ಜರುಗಿದ ಭ್ರಷ್ಟಾಚಾರಗಳನ್ನು ತನಿಖೆ ಮಾಡಿಸುವುದಾಗಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಲ್ಯಾಣ ಕರ್ನಾಟಕದ ಏಕೈಕ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಸುದ್ದಿಮೂಲ’ ದೊಂದಿಗೆ ಮಾತನಾಡಿ, ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನೀಡಿದ ಅನುದಾನದಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುವುದು ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂ. ನೀಡುವುದಾಗಿ ತಿಳಿಸಿದ ಅವರು, ಆ ಭಾಗದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದ ಹಲವು ಅಭಿವೃದ್ಧಿ ಯೋಜನೆಗಳು ಮತ್ತು ನೀರಾವರಿ ಯೋಜನೆಗಳಿಗಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪೂರ್ಣ ಪ್ರಮಾಣದ ಸಂಪುಟ ರಚನೆ ಬರುವ ಒಂದು ವಾರದೊಳಗಾಗಿ ಪುನಃ ಹಿರಿಯರೆಲ್ಲರೂ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಿದರು. ನನಗೆ ಯಾವುದೇ ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧ. ಏಳು ಕೋಟಿ ಜನರಲ್ಲಿ 224 ಜನರಿಗೆ ಮಾತ್ರ ಶಾಸಕರಾಗುವ ಅವಕಾಶ ದೊರೆಯುತ್ತದೆ ಮತ್ತು 34 ಜನರಿಗೆ ಮಾತ್ರ ಸಚಿವರಾಗುವ ಭಾಗ್ಯ ಸಿಗುತ್ತದೆ. ಹೀಗಾಗಿ ಯಾವುದೇ ಖಾತೆ ನೀಡಿದರೂ ಅದನ್ನು ಜನಪರವಾಗಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.