ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 20: ರಾಜ್ಯದ ಜನತೆಗೆ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಇಂದು ಜರುಗಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ಬಳಿಕ ಸರ್ಕಾರಿ ಆದೇಶಗಳು ಜಾರಿಯಾಗಿವೆ.
ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸಂಪುಟ ಸಭೆ ನಡೆಸಿದ ಅವರು ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಗ್ಯಾರೆಂಟಿ (ಭರವಸೆ)ಗಳನ್ನು ತನ್ನ ಅಧಿಕಾರ ಅವಧಿ ಪ್ರಾರಂಭವಾಗುವ ಮುನ್ನವೇ ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ಆದರೆ, ಸಂಜೆ ವೇಳೆಗೆ ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಮಹಿಳೆಯರಿಗೆ ಉಚಿತ ಬಸ್ಪಾಸ್ ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಬಿದ್ದಿದೆ.
ಗೃಹ ಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ., ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಳಿಗೆ ಪ್ರತಿ ಸದ್ಯರಿಗೆ 10 ಕೆ.ಜಿ. ಅಕ್ಕಿ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 1500 ರೂ. ಹಾಗೂ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಇಂದಿನ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊಟ್ಟ ಭರವಸೆಗಳನ್ನು ಸಂಪುಟದಲ್ಲಿ ಈಡೇರಿಸಿದ್ದು, ಇದನ್ನು ಮುಂದಿನ ಸಂಪುಟ ಸಭೆಯೊಳಗಾಗಿ ಮಾಹಿತಿ ಪಡೆದು ಜಾರಿ ಮಾಡಲು ಆದೇಶಿಸಿರುವುದಾಗಿ ಹೇಳಿದರು.
ಈ ಎಲ್ಲಾ ಯೋಜನೆಗಳ ಜಾರಿಗೆ ವಾರ್ಷಿಕ 50,000 ಕೋಟಿ ರೂ ಅಗತ್ಯವಿದೆ. ಎಷ್ಟೇ ಕಷ್ಟ ಎದುರಾದರೂ ಜನತೆಗೆ ನೀಡಿದ ಈ ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಇದರಿಂದ ರಾಜ್ಯಕ್ಕೆ ಯಾವುದೇ ರೀತಿಯ ಅರ್ಥಿಕ ನಷ್ಟವಾಗಲೀ ಅಥವಾ ಸಾಲ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಕಳೆದ ಬಾರಿ 2013 ರಿಂದ 2018 ರವರೆಗಿನ ಅವಧಿಯಲ್ಲಿನ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಲ್ಲದೆ, ಇಂದಿರಾ ಕ್ಯಾಂಟೀನ್ ಸೇರಿದಂತೆ 30 ಅಪ್ರಕಟಿತ ಭರವಸೆಗಳನ್ನೂ ಜಾರಿಗೊಳಿಸಲಾಗಿತ್ತು. ಈಗಲೂ ಸಹ ಪ್ರಣಾಳಿಕೆಯಲ್ಲಿ ಇರುವ ಎಲ್ಲಾ ಯೋಜನೆಗಳನ್ನು ಮುಂದಿನ ಐದು ವರ್ಷದೊಳಗೆ ಅನುಷ್ಠಾನ ಗೊಳಿಸುತ್ತೇವೆ.
ಇಂದಿರಾ ಕ್ಯಾಂಟೀನ್ ಪುನರಾರಂಭ:
ರಾಜ್ಯ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಕೆಲವೆಡೆ ಬಂದ್ ಮಾಡಿದೆ. ಇಂದಿರಾ ಕ್ಯಾಂಟೀನ್ಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ಪುನರಾರಂಭ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಘೋಷಿಸಿದರು.
ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತ ಸಂಗ್ರಹವಾದರೂ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ಧೂ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲು ದೊರೆಯಲಿಲ್ಲ ಎಂಬ ಅಂಶವನ್ನು ಹೊರಹಾಕಿದ ಮುಖ್ಯಮಂತ್ರಿ ರಾಜಸ್ವ ಸಂಗ್ರಹಣೆಯಲ್ಲಿ ಕಠಿಣತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಗೂ ಇನ್ನಿತರ ಆಡಳಿತ ಕ್ರಮಗಳನ್ನು ಜಾರಿಗೆ ತಂದು ಜನತೆಗೆ ಕೊಟ್ಟ ಮಾತಿನಂತೆ ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದೂ ಅವರು ಹೇಳಿದರು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಡಾ.ಜಿ. ಪರಮೇಶ್ವರ್, ಎಂ.ಬಿ. ಪಾಟೀಲ, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.