ಬೆಂಗಳೂರು ಮಳೆಗೆ ಎರಡನೇ ಬಲಿ
ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತೊಬ್ಬ ಯುವಕನ ಬಲಿ ಪಡೆದಿದ್ದು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ಮಳೆ ಬರುವಾಗ ಅಂಡರ್ಪಾಸ್ಗಳ ಒಳಗೆ ಸಂಚರಿಸಬಾರದು ಎಂದು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಭಾನುವಾರ ಕೆ.ಆರ್. ವೃತ್ತದ ಅಂಡರ್ಪಾಸ್ನಲ್ಲಿ ಕಾರು ಮುಳುಗಿ ಹೈದರಾಬಾದ್ ಮೂಲದ ಯುವತಿ, ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಮೃತಪಟ್ಟಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸೋಮವಾರ ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಭಾನುರೇಖಾ ಕುಟುಂಬದವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಚಾಲಕನ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ ಎಂಬ ಆರೋಪದ ಮೇಲೆ ಕಾರು ಚಾಲಕ ಹರೀಶ್ನನ್ನು ಸೋಮವಾರ ಬಂಧಿಸಲಾಗಿದೆ. ಮಳೆ ನೀರು ಇದೆ, ಆ ಮಾರ್ಗವಾಗಿ ಹೋಗುವುದು ಬೇಡ ಎಂದು ಹೇಳಿದರೂ ಸಹ ಅಂಡರ್ಪಾಸ್ನಲ್ಲಿ ಕಾರು ಚಲಾಯಿಸಿ ಮಳೆಯಲ್ಲಿ ಸಿಲುಕುವಂತೆ ಮಾಡಿ ನಿರ್ಲಕ್ಷ್ಯ ತೋರಿದ್ದಾನೆ ಎಂದು ಆತನ ವಿರುದ್ಧ ಆರೋಪ ಮಾಡಲಾಗಿದೆ.
ಇನ್ನು ಭಾನುವಾರ ಸುರಿದ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಯುವಕ ಲೋಕೇಶ್ ಮೃತದೇಹ ಸೋಮವಾರ ಪತ್ತೆಯಾಗಿದ್ದು, ಭಾನುರೇಖಾ ಬಳಿಕ ಭಾರಿ ಮಳೆ ಎರಡನೇ ಬಲಿ ಪಡೆದುಕೊಂಡಿದೆ. ಕೆ.ಪಿ. ಅಗ್ರಹಾರದ ರಾಜಕಾಲುವೆಯಲ್ಲಿ ಯುವಕ ಕೊಚ್ಚಿಹೋಗಿದ್ದ. ಬ್ಯಾಟರಾಯನಪುರದ ಬಳಿ ಆತನ ಮೃತದೇಹ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗಿದೆ.
ಇನ್ನು ಭಾರಿ ಮಳೆಯ ಕಾರಣ ಸಾರ್ವಜನಿಕರು ವಿಧಾನಸೌಧದ ಸುತ್ತಲಿನ 6 ಕಿಮೀ ವ್ಯಾಪ್ತಿಯಲ್ಲಿರುವ ಅಂಡರ್ಪಾಸ್ಗಳಲ್ಲಿ ಸಂಚರಿಸಬಾರದು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ನಗರದ ಹಲವೆಡೆ ಸೋಮವಾರ ಸಂಜೆಯೂ ಭಾರಿ ಮಳೆ ಸುರಿದಿದೆ. ಮಲ್ಲೇಶ್ವರ, ಮೆಜೆಸ್ಟಿಕ್, ಕಾರ್ಪೊರೇಷನ್, ಗಿರಿನಗರ, ಶಾಂತಿನಗರ, ರಿಚ್ಮಂಡ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಸುರಿದಿದೆ.
ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಈಜಿಪುರ, ಶಾಂತಿನಗರ ಸೇರಿದಂತೆ ಹಲವೆಡೆ ನುರಾರು ಮನೆಗಳಿಗೆ ನೀರು ನುಗ್ಗಿವೆ. ಮನೆಗಳ ಕಾಂಪೌಂಡ್ ಕುಸಿದು ಬಿದ್ದಿವೆ. ನಗರದ ಎಲ್ಲೆಡೆ ಮರಗಳು ಧರೆಗುರುಳುತ್ತಿದ್ದು ವಾಹನ ಸವಾರರು ಆತಂಕದಿಂದ ಸಂಚಾರ ಮಾಡುವಂತಾಗಿದೆ.
ಅವೈಜ್ಞಾನಿಕ ಕೆಳಸೇತುವೆ ಬಂದ್:
ಬೆಂಗಳೂರಿನಲ್ಲಿರುವ ಅವೈಜ್ಞಾನಿಕ ಕೆಳಸೇತುವೆಗಳನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಮಳೆ ನೀರು ಸುಗಮವಾಗಿ ಹರಿಯದ, ಈ ಹಿಂದೆ ನೀರು ನಿಂತು ಅನಾಹುತಗಳು ಸಂಭವಿಸಿರುವಂತಹ ಕೆಳ ಸೇತುವೆಗಳನ್ನು ಪಟ್ಟಿ ಮಾಡಿ ಅಂತಹವುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದು ಹೇಳಿದರು.
ಮಳೆ ನೀರಿನ ಜೊತೆಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಒಳಚರಂಡಿ ಸರಿ ಇಲ್ಲದ ಕಾರಣವೂ ಆ ನೀರು ಅಂಡರ್ಪಾಸ್ಗಳತ್ತ ಹರಿದು ಬರುತ್ತದೆ. ಇದರಿಂದಾಗಿ ಕೆಳಸೇತುವೆಗಳಲ್ಲಿ ಇದ್ದಕ್ಕಿಂದ್ದಂತೆ ನೀರು ತುಂಬಿ ಅನಾಹುತಗಳು ಸಂಭವಿಸುತ್ತವೆ ಎಂದು ತುಷಾರ್ ಗಿರಿನಾಥ್ ಹೇಳಿದರು.
40ಕ್ಕೂ ಹೆಚ್ಚು ಮರಗಳು ಧರೆಗೆ
ಕಬ್ಬನ್ಪಾರ್ಕ್ನಲ್ಲಿನ ಮರಗಳು ಧರೆಗೆ ಬೆಂಗಳೂರಿನಲ್ಲಿ 2 ದಿನಗಳಿಂದ ಸುರಿದ ಮಳೆಯಿಂದಾಗಿ ಕಬ್ಬನ್ ಪಾರ್ಕ್ನಲ್ಲಿ 40ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಕಬ್ಬನ್ ಉದ್ಯಾನವನದಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಮರಗಳಿದ್ದು, ರಸ್ತೆಯ ಮೇಲೆ ಬಿದ್ದಿದ್ದ ಎಲ್ಲ ಮರಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಮೂರು ದಿನ ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ಕಬ್ಬನ್ ಪಾರ್ಕ್ ತೋಟಗಾರಿಕೆ ಉಪನಿರ್ದೇಶಕ ಬಾಲಕೃಷ್ಣ ಹೇಳಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದ ಆಭರಣಗಳು
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ನಿಹಾನ್ ಆಭರಣ ಮಳಿಗೆಗೆ ಮಳೆ ನೀರು ನುಗ್ಗಿದ್ದು, ಈ ವೇಳೆ ಮಳಿಗೆಯಲ್ಲಿದ್ದ ಕೊಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕೊಚ್ಚಿಕೊಂಡು ಹೋಗಿವೆ.
ಚಿನ್ನಾಭರಣ ಅಂಗಡಿಯೊಳಗೆ ಇದ್ದಕ್ಕಿದ್ದಂತೆ ಮಳೆ ನೀರು ನುಗ್ಗಿವೆ. ಈ ವೇಳೆ ಸಿಬ್ಬಂದಿ ಇದ್ದರಾದರೂ ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಲು ಪ್ರಾರಂಭಿಸಿವೆ. ಅದನ್ನು ತಪ್ಪಿಸಲು ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆದರೂ ಸಾಕಷ್ಟು ಆಭರಣಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಚಿನ್ನಾಭರಣ ಮಳಿಗೆಗೆ ಮಳೆ ನೀರು ನುಗ್ಗಿ ಎರಡೂವರೆ ಕೋಟಿ ನಷ್ಟವಾಗಿದೆ ಎಂದು ನಿಹಾನ್ ಜ್ಯೂವೆಲರ್ ಮಾಲಕಿ ಕಣ್ಣೀರಿಟ್ಟಿದ್ದಾರೆ.