ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಎಡವಟ್ಟುಗಳನ್ನು ತಿದ್ದುವ ಮೂಲಕ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನೈತಿಕ ಪೊಲೀಸ್ಗಿರಿ ಮಾಡುವವರನ್ನು ಮಟ್ಟ ಹಾಕಬೇಕು. ಎಲ್ಲೆಲ್ಲಿ ನೈತಿಕ ಪೊಲೀಸ್ಗಿರಿ ಮಾಡಲಾಗುತ್ತದೋ ಅಂತಹ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಜನಸಾಮಾನ್ಯರ ಮೇಲೆ ಯಾರೂ ಸಹ ನೈತಿಕ ಪೊಲೀಸ್ಗಿರಿ ಮಾಡದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಪ್ರಕರಣಗಳು ನಡೆದರೂ ಕಾನೂನು ಪ್ರಕಾರವೇ ಕ್ರಮ ಆಗಬೇಕು ಹೊರತು ಯಾರೋ ಬಂದು ತಾವೇ ಪೊಲೀಸರಂತೆ ಕಾನೂನು ಕೈಗೆತ್ತಿಕೊಂಡು ವರ್ತನೆ ಮಾಡಲು ಬಿಡಬಾರದು ಎಂದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ಕಾನೂನು ಪಾಲನೆ ಮಾಡುವಾಗ ಯಾವುದೇ ಜಾತಿ ಧರ್ಮ ನೋಡಬಾರದು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸಬೇಕು. ಅನ್ಯಾಯ ಮಾಡಿದವರು ಯಾವುದೇ ಧರ್ಮ, ಜಾತಿಗೆ ಸೇರಿದರೂ ಯಾವುದೇ ಸಾಫ್ಟ್ಕಾರ್ನರ್ ತೋರಿಸದೆ ಅಂತವರನ್ನು ಮಟ್ಟ ಹಾಕಬೇಕು ಎಂದು ಪೊಲೀಸರನ್ನು ಬಡಿದೆಚ್ಚರಿಸಿದರು.
ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರಬೇಕು. ದೂರು ಕೊಡಲು ಯಾರೇ ಠಾಣೆಗೆ ಬಂದರೂ ಅವರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು. ಯಾವುದಾದರೂ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಅಪರಾಧಗಳು ನಡೆದರೆ ಆ ಇನ್ಸ್ಪೆಕ್ಟರ್ ಮಾತ್ರ ಜವಾಬ್ದಾರ ಅಲ್ಲ. ಅಲ್ಲಿನ ಡಿಸಿಪಿಯನ್ನೂ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕೇಸರೀಕರಣ ಮಾಡಲು ಹೊರಟಿದ್ದೀರಾ?
ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ? ಮಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಪೊಲೀಸರೇ ಕೇಸರಿ ಶಾಲು ಹಾಕಿಕೊಂಡು ಫೋಸು ಕೊಡುತ್ತಾರೆ. ಹಾಗಾದರೆ ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಇದು ಜಾತ್ಯತೀತ ಸರ್ಕಾರ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಪೊಲೀಸರು ಅವರ ಕರ್ತವ್ಯವನ್ನು ಮಾತ್ರ ಮಾಡಬೇಕು ಹೊರತು ಯಾವುದೋ ಧರ್ಮದ ಪರವಾಗಿ ನಿಲ್ಲಬಾರದು. ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಒಬ್ಬರ ಎಡಿಜಿಪಿ ಅಧಿಕಾರಿಯೇ ಉತ್ತರ ಪತ್ರಿಕೆಗಳನ್ನು ತಿದ್ದುತ್ತಾರೆ ಎಂದರೆ ನಿಮ್ಮ ಇಲಾಖೆ ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ. ಪೊಲೀಸ್ ಇಲಾಖೆಯ ಘನತೆಯನ್ನು ಹಾಳು ಮಾಡುವುದನ್ನು ನಾವು ಒಪ್ಪುವುದಿಲ್ಲ. ಇಲ್ಲಿ ಎಲ್ಲವೂ ಸ್ವಚ್ಛವಾಗಿರಬೇಕು, ಪಾರದರ್ಶಕವಾಗಿರಬೇಕು. ನೀವು ಯಾರಿಗೂ ಮಾಮೂಲು ಕೊಡುವುದು ಬೇಡ. ಜನಸಾಮಾನ್ಯರಿಗೆ ಕಿರುಕುಳ ನೀಡದೆ ಉತ್ತಮವಾಗಿ ಕೆಲಸ ಮಾಡಿದರೆ ಸಾಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಳೆದ 4 ವರ್ಷ ನೀವು ಸರ್ಕಾರದಲ್ಲಿ ಏನು ಮಾಡಿದ್ದೀರಿ ಎಂಬುದು ಗೊತ್ತಿದೆ. ನಿಮ್ಮ ಆ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯಲಾರದು. ನನ್ನ, ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಿ ಗೊತ್ತಿದೆ. ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ಏನಾಯ್ತು ಗೊತ್ತಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಅಂದರೂ ಅವರ ಮೇಲೆ ಕೇಸ್ ಹಾಕಿಲ್ಲ ನೀವು. ಅಷ್ಟು ದೊಡ್ಡ ಪ್ರಕರಣ ಆದರೂ ಕೇಸ್ ಹಾಕದೇ ನಮ್ಮ ವಿರುದ್ಧ ನಡೆದುಕೊಂಡಿದ್ದಿರಿ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ, ಅದನ್ನ ಉಳಿಸಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಡಿಕೆಶಿ ಸೂಚನೆ ನೀಡಿದರು.
ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಜಮೀರ್ ಅಹಮದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಜರಿದ್ದರು.