ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 23: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2022ನೇ ಸಾಲಿನ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ದಾವಣಗೆರೆಯ ಅವಿನಾಶ್ 31ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದರೆ, ಹೆಚ್.ಎಸ್. ಭಾವನಾ 55ನೇ ರ್ಯಾಂಕ್ ಪಡೆಯುವುದರೊಂದಿಗೆ ಎರಡನೇ ಟಾಪರ್ ಆಗಿದ್ದಾರೆ. ಒಟ್ಟಾರೆ ಕರ್ನಾಟಕದ 26 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ವಿವಿಧ ರ್ಯಾಂಕ್ಗಳನ್ನು ಪಡೆದಿದ್ದಾರೆ.
ಯುಪಿಎಸ್ಸಿ ಸಿಎಸ್ಇ ಪ್ರಿಲಿಮಿನರಿ ಪರೀಕ್ಷೆಯನ್ನು ಕಳೆದ ಜೂನ್ 5ರಂದು ನಡೆಸಲಾಗಿತ್ತು. ಅದರ ಫಲಿತಾಂಶವನ್ನು ಜೂನ್ 22ರಂದು ಬಿಡುಗಡೆ ಮಾಡಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಕಳೆದ ಸೆ.16ರಿಂದ 25ರವರೆಗೆ ನಡೆಸಲಾಗಿತ್ತು. ಆ ಫಲಿತಾಶವನ್ನು ಡಿ.6ರಂದು ಘೋಷಿಸಲಾಗಿತ್ತು. ಸಂದರ್ಶನಗಳು ಇದೇ ಮೇ 18ರಂದು ಮುಕ್ತಾಯವಾಗಿದ್ದವು. ಒಟ್ಟಾರೆ 933 ಅಭ್ಯರ್ಥಿಗಳು, ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಸಹಿತ ವಿವಿಧ ಹುದ್ದೆಗಳಿಗೆ ನೇಮಕ ಆಗಿದ್ದಾರೆ.
ಇಷಿತಾ ಕೀಶೋರ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಯೂನಿವರ್ಸಲ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದ ಗರಿಮಾ ಲೋಹಿಯಾ ದೇಶಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ. ಉಮಾ ಹರಥಿ ಎನ್ ಮತ್ತು ಸ್ಮೃತಿ ಮಿಶ್ರಾ ನಂತರದ ಸ್ಥಾನದಲ್ಲಿದ್ದಾರೆ.ಅಲ್ಲದೆ, ಮೊದಲ ಹತ್ತು ರ್ಯಾಂಕ್ಗಳಲ್ಲಿ ಆರು ಮಂದಿ ಮಹಿಳೆಯರು ಇದ್ದರೆ, ನಾಲ್ಕರು ಯುವಕರು ಇದ್ದಾರೆ.
ದಾವಣಗೆರೆಯ ವಿ. ಅವಿನಾಶ್ 31ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕಕ್ಕೆ ಪ್ರಥಮ ಸ್ಥಾನದಲ್ಲಿದ್ದಾರೆ. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅವಿನಾಶ್ ಹೆಚ್ಚಿನ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಆಗುವ ಕನಸು ನನಸು ಮಾಡಿಕೊಂಡಿದ್ದಾರೆ. ಅವಿನಾಶ್ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ಮೈಸೂರಿನ ಕುಂಪುನಗರದ ಎಂ.ಪೂಜಾ 390ನೇ ರ್ಯಾಂಕ್ ಪಡೆದಿದ್ದಾರೆ. ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದರು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಮುಕುಂದ ಹಾಗೂ ಪದ್ಮಾವತಿ ದಂಪತಿ ಪುತ್ರಿ ಆಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ತಾಂಡಾದವರಾದ ಶೃತಿ ಯರಗಟ್ಟಿ 362ನೇ ರ್ಯಾಂಕ್ ಬಂದಿದೆ. ಮೈಸೂರಿನ ಅಂಗನವಾಡಿ ಶಿಕ್ಷಕಿಯ ಮಗ ಜೆ ಭಾನುಪ್ರಕಾಶ್ಗೆ 448ನೇ ರ್ಯಾಂಕ್ ಪಡೆದು ಮೆಚ್ಚುಗೆ ಗಳಿಸಿದ್ದಾರೆ. , ಬಿವಿ ಶ್ರೀದೇವಿಗೆ 525ನೇ ರ್ಯಾಂಕ್, ಆದಿನಾಥ್ ಪದ್ಮಣ್ಣಗೆ 566ನೇ ರ್ಯಾಂಕ್ ಪಡೆದಿದ್ದಾರೆ.
617ನೇ ರ್ಯಾಂಕ್ ಪಡೆದಿರುವ ಶಿವಮೊಗ್ಗ ಮೂಲದ ಮೇಘನಾ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. “ಮಗಳು ಎಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಬೆಳಿಗ್ಗೆ 7 ಗಂಟೆಗೆ ಗ್ರಂಥಾಲಯಕ್ಕೆ ಹೋಗಿ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದಳು. ಈ ಬಾರಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಇದ್ದು, ಆಕೆಯ ರ್ಯಾಂಕ್ಗೆ ಐಪಿಎಸ್ ಅವಕಾಶ ಸಿಗಬಹುದು” ಎಂದು ಮೇಘನಾ ಅವರ ತಂದೆ ಐಎಂ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುದ್ದೇಬಿಹಾಳ ತಾಲೂಕ ಸರೂರು ತಾಂಡಾದ ಅರ್ಜುನ ಹಾಗೂ ಉಮಾಬಾಯಿ ಅವರ ಮಗ ಯಲಗೂರೇಶ 890 ನೇ ರ್ಯಾಂಕ್ ಪಡೆದು ಮೆಚ್ಚುಗೆ ಗಳಿಸಿದ್ದಾರೆ. ತುಂಡು ಜಮೀನಿಲ್ಲದೆಯೂ ಹೆತ್ತವರು ಕೂಲಿ ಮಾಡುತ್ತ ಓದಿಸಿದ್ದರು. ತರಬೇತಿ ಹಂತದಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಅಣ್ಣ ನೀಡಿದ ಆರ್ಥಿಕ ನೆರವು ಇದೀಗ ಈ ಯುವಕನನ್ನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಮಾಡಿದೆ.
ಬಾಕ್ಸ್…
ಕರ್ನಾಟಕದ ಅಭ್ಯರ್ಥಿಗಳು ಮತ್ತು ರ್ಯಾಂಕ್
ವಿ. ಅವಿನಾಶ್ – 31
ಡಿ ಸೂರಜ್- 197,
ಎ ಎಲ್ ಆಕಾಶ್- 210,
ರವಿರಾಜ್ ಅವಸ್ತಿ- 224
ಆರ್. ಚಲುವರಾಜ್ -238
ಕೆ.ಸೌರಭ್ -260,
ದಾಮಿನಿ ಎನ್ ದಾಸ್ 345
ಪೂಜಾ ಎಂ 390,
ಜೆ ಭಾನುಪ್ರಕಾಶ್ 448
ಶ್ರೀಕೇಶ್ ಕುಮಾರ್ ರೈ 457
ಟಿ ಕೈಲಾಶ್ 465
ಬಿ ಎಸ್ ಧನುಶ್ ಕುಮಾರ್ 501
ರಾಹುಲ್ 508
ಬಿ ವಿ ಶ್ರೀದೇವಿ 525
ಆದಿನಾಥ್ ಪದ್ಮಣ್ಣ ತಮದಡ್ಡಿ 566
ಸಿದ್ದಲಿಂಗಪ್ಪ ಕೆ ಪೂಜಾರ್ 589
ವರುಣ್ ಕೆ ಗೌಡ 594
ಮೇಘನಾ 617
ಎಂ ಎಸ್ ತನ್ಮಯ್ 690
ಸಿ ಪಿ ನಿಮಿಷಾಂಭ 659
ಮೊಹಮ್ಮದ್ ಸಿದ್ದೀಕ್ 745
ಅಕ್ಷಯ್ ಕುಮಾರ್ 746
ಕೆ ಹೆಚ್ ಅಭಿಷೇಕ್ 813
ಹೆಚ್ ಎಸ್ ಪದ್ಮನಾಭ 923
ಹೆಚ್ ಪಿ ಮನೋಜ್ 929