KGF M.G. Lack of infrastructure in the market
ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 24: : ರಾಬರ್ಟ್ಸನ್ ಪೇಟೆಯ ಎಂ.ಜಿ. ಮಾರುಕಟ್ಟೆಯಲ್ಲೇ ಇರುವ ಎರಡನೇ ಆವರಣದಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ದಶಕಗಳಿಂದ ಅದನ್ನು ಸರಿಪಡಿಸುವ ಗೋಜಿಗೆ ನಗರಸಭೆ ಮುಂದಾಗಿಲ್ಲ.
ಮುಖ್ಯ ಮಾರುಕಟ್ಟೆ ಹಿಂಭಾಗದಲ್ಲಿರುವ ಈ ಮಾರುಕಟ್ಟೆಯಲ್ಲಿ ಸುಮಾರು 40 ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ನಡೆಯುತ್ತದೆ. ಕ್ರಿಸ್ಮಸ್, ರಂಜಾನ್ ಮತ್ತು ವಾರಾಂತ್ಯ ದಿನಗಳಲ್ಲಿ ಈ ಜಾಗ ಜನದಟ್ಟಣೆಯಿಂದ ಕೂಡಿರುತ್ತದೆ. ಎಲ್ಲಿ ಎಲ್ಲಾ ವಿಧದ ಮಾಂಸ ಲಭ್ಯವಾಗುವುದರಿಂದ ಬಹುತೇಕ ಮಂದಿ ಈ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ.
ಇತ್ತೀಚೆಗೆ ಇಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು . ಆದರೆ ಅದು ಇನ್ನೂ ಪೂರ್ಣವಾಗಿಲ್ಲ. ಚರಂಡಿ ಮೇಲೆ ಸಿಮೆಂಟ್ ಬ್ಲಾಕ್ ಗಳನ್ನು ಅಡ್ಡಾದಿಡ್ಡಿಯಾಗಿ ಹಾಕಿರುವುದರಿಂದ ಜನಸಾಮಾನ್ಯರಿಗೆ ಪುಟ್ ಪಾತ್ ಮೇಲೆ ನಡೆಯುವುದು ಕಷ್ಟಕರವಾಗಿದೆ. ಇನ್ನು ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತು ಮೇಲೆ ಬಂದಿದ್ದು. ಕಲ್ಲುಗಳು ಮೇಲೆದ್ದಿವೆ. ಮಳೆ ಬಂದರಂತೂ ಇಡೀ ರಸ್ತೆ ಅಕ್ಷರಶಃ ಕೆಸರ ಗದ್ದೆಯಂತಾಗುತ್ತದೆ.
ಕಳೆದ 3-4 ದಿನಗಳಿಂದ ನಗರದಲ್ಲಿ ಮಳೆ ಬೀಳುತ್ತಿರುವುದರಿಂದ ರಸ್ತೆಯಲ್ಲಿ ಕಾಲಿಡಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ . ಇದರ ಜೊತೆಗೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ, ಮಾಂಸದ ಅಂಗಡಿಗೆಗಳಲ್ಲಿ ಮಾಂಸ ತೊಳೆಯುವ ನೀರು ಚರಂಡಿ ಬಿಟ್ಟು ರಸ್ತೆಯಲ್ಲಿಯೇ ಹರಿದು ಹೋಗುತ್ತದೆ ಎಂದು ಇಲ್ಲಿಗೆ ಬರುವ ಗ್ರಾಹಕರು ದೂರಿದ್ದಾರೆ.
ಮಾಂಸದ ಅಂಗಡಿಗಳ ಜೊತೆಗೆ ಗುಜರಿ ಅಂಗಡಿಗಳು ಕೂಡ ಈ ಭಾಗದಲ್ಲಿ ಅಧಿಕವಾಗಿದೆ. ಗುಜರಿ ಅಂಗಡಿಗಳ ಮಾಲೀಕರು ತಮ್ಮ ಸಾಮಾನುಗಳನ್ನು ಅಂಗಡಿ ಒಳಗಿರಿಸಿಕೊಳ್ಳಲು ಜಾಗವಿಲ್ಲದೆ ರಸ್ತೆ ಬದಿಯಲ್ಲಿ ಹಾಕಿರುವುದರಿಂದ ಕಿರಿದಾದ ರಸ್ತೆಯಲ್ಲಿ ಮತ್ತಷ್ಟು ಕಿರಿಕಿರಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಾರುಕಟ್ಟೆಗೆ ಉತ್ತಮ ವ್ಯವಸ್ಥೆ ಮಾಡಿ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಳಿ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನಾವು ಪ್ರತಿನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಇಲ್ಲಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಶಾಸಕಿಗೆ ತೋರಿಸಿ ಮನದಟ್ಟು ಮಾಡಿದ್ದೇವೆ ಎಂದು ಎಂಜಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದೇವೇಂದ್ರನ್ ಹೇಳುತ್ತಾರೆ.