ಸುದ್ದಿಮೂಲ ವಾರ್ತೆ
ಬೆಂಗಳೂರು , ಮೇ. 24: ಸಿದ್ದರಾಮಯ್ಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಬಡವರ ಪರ ಇದ್ದ ಯೋಜನೆಗಳಿಗೆ ಮತ್ತೆ ಜೀವ ಸಿಕ್ಕಿದೆ. ಈ ಪೈಕಿ ಇಂದಿರಾ ಕ್ಯಾಂಟೀನ್ಗೂ ಸಿದ್ದರಾಮಯ್ಯ ಸರ್ಕಾರದಿಂದ ಮರುಜೀವ ಸಿಕ್ಕಿದ್ದು, ಬಡವರ 5 ಸ್ಟಾರ್ ಹೋಟೆಲ್ ‘ಇಂದಿರಾ ಕ್ಯಾಂಟೀನ್’ಗಳಿಗೆ ರಾಜ್ಯಾದ್ಯಂತ ಹಳೇ ರೂಪ ನೀಡಲು ಸಜ್ಜಾಗಿದೆ. ಈ ಬಗ್ಗೆ ಕಾಂಗ್ರೆಸ್ ಅಕೌಂಟ್ ಟ್ವೀಟ್ ಮಾಡಿ ಸದ್ದು ಮಾಡಿದೆ.
ಇಂದಿರಾ ಕ್ಯಾಂಟೀನ್ ಅನ್ನೋದು ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಆಗಿತ್ತು. ಈ ಯೋಜನೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಸಿದು ಬಂದವರ ಹೊಟ್ಟೆ ತುಂಬಿಸುತ್ತಿತ್ತು. ಅದರಲ್ಲೂ ಬಡವರ ಪಾಲಿಗೆ ಇಂದಿರಾ ಕ್ಯಾಂಟೀನ್ ಅಕ್ಷಯಪಾತ್ರೆ ಆಗಿತ್ತು. ಆದರೆ ಕಳೆದ ಕೆಲ ವರ್ಷದಿಂದ ಬಿಜೆಪಿ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಮುಚ್ಚುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿತ್ತು. ಆದರೆ ಈಗ 135 ಸ್ಥಾನದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಈ ಹಿಂದಿನ ತನ್ನ ಜನಪ್ರಿಯ ಯೋಜನೆಗೆ ಹೊಸ ಟಚ್ ನೀಡಲಿದೆಯಂತೆ.
ರಾಜ್ಯದಲ್ಲಿ ಬಡವರಿಗಾಗಿ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿತ್ತು. 2013ರಿಂದ 2018ರ ತನಕ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಅವರು ಇದೇ ರೀತಿ ಹಲವು ಯೋಜನೆ ಜಾರಿಗೆ ತಂದಿದ್ದರು. ತಮಿಳುನಾಡಿನ ‘ಅಮ್ಮ ಕ್ಯಾಂಟೀನ್’ಗಳ ರೀತಿಯಲ್ಲಿ 2017ರಲ್ಲಿ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ 175 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ರಾಜ್ಯಾದ್ಯಂತ ಹಲವು ಜಿಲ್ಲಾ ಕೇಂದ್ರ, ಪಟ್ಟಣಗಳಲ್ಲೂ ಇಂದಿರಾ ಕ್ಯಾಂಟಿನ್ಗಳು ಕಾರ್ಯನಿರ್ವಹಿಸುತ್ತಿದ್ದವು.
ಅಂದಹಾಗೆ ಕಾಂಗ್ರೆಸ್ ಈ ಆರೋಪವನ್ನ ಮೊದಲಿನಿಂದಲೂ ಮಾಡುತ್ತಲೇ ಬಂದಿದೆ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕ್ಯಾಂಟೀನ್ಗಳು ಹೊಳಪು ಕಳೆದುಕೊಳ್ಳಲು ಪ್ರಾರಂಭಿಸಿದವು. ಗುತ್ತಿಗೆದಾರರಿಗೆ ಪಾವತಿ ವಿಳಂಬ, ನಗರ ಸ್ಥಳೀಯ ಸಂಸ್ಥೆಗಳ ಹಂಚಿಕೆಯಲ್ಲಿ ಗಣನೀಯ ಕಡಿತ ಮತ್ತು ರಾಜ್ಯ ಸರ್ಕಾರ ಕಡಿತ ಮಾಡಿದ್ದ ಅನುದಾನ ಕ್ಯಾಂಟೀನ್ಗಳ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು ಎಂಬ ಆರೋಪವಿತ್ತು. ಆದರೆ ಈಗ ಮತ್ತೊಮ್ಮೆ ಸಿಎಂ ಆಗಿರುವ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ಗಳಿಗೆ ಮರುಜೀವ ತುಂಬಲು ಸಜ್ಜಾಗಿದ್ದಾರೆ.
ಇನ್ನು ಈ ಕುರಿತು ಕರ್ನಾಟಕ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, ‘ಕಾಯಕಯೋಗಿ ಬಸವಣ್ಣನವರ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಬಡಜನರ ‘ಇಂದಿರಾ ಕ್ಯಾಂಟೀನ್’ಗಳನ್ನು ಪುನಶ್ಚೇತನಗೊಳಿಸಲಿದೆ. ಬಿಜೆಪಿ ಸರ್ಕಾರ ಮಾಡಿದ ಅವಾಂತರಗಳನ್ನು ಸರಿಪಡಿಸಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ಗಳಲ್ಲಿ ಅತ್ಯುತ್ತಮ ಆಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು. ಎಂದಿದೆ. ಈ ಮೂಲಕ ಹಿಂದಿನ ಬಿಜೆಪಿ ಸರ್ಕಾರಕ್ಕೆ ‘ಇಂದಿರಾ ಕ್ಯಾಂಟೀನ್’ ವಿಚಾರದಲ್ಲಿ ಕಾಂಗ್ರೆಸ್ ಸವಾಲು ಹಾಕಿದೆ.