ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 26: ದೇವೇಗೌಡರ ನೇತೃತ್ವದಲ್ಲಿ ಬೃಹತ್ ರೈತಪರ ಹೋರಾಟಕ್ಕೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಿರ್ಣಯಗಳ ಕುರಿತು ಅವರು ಶುಕ್ರವಾರ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು.
ದೇಶದ ಉದ್ದಗಲಕ್ಕೂ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸೂಕ್ತ ಬೆಲೆ, ಸಬ್ಸಿಡಿ, ರಸಗೊಬ್ಬರ ಸಮಸ್ಯೆ, ಇತ್ಯಾದಿ ಸೌಲಭ್ಯ ಸಿಗದೆ ಕಂಗಾಲಾಗಿದ್ದಾರೆ. ಹೀಗಾಗಿ ದೇಶಾದ್ಯಂತ ರೈತರ ಪರವಾಗಿ ಬೃಹತ್ ಹೋರಾಟವನ್ನು ದೇವೇಗೌಡರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ರೂಪಿಸಬೇಕು ಎಂದು ಕೇರಳದ ಜೆಡಿಎಸ್ ಪಕ್ಷದ ಹಿರಿಯ ಶಾಸಕರು ಹಾಗೂ ಸಚಿವರೂ ಆಗಿರುವ ಕೃಷ್ಣನ್ ಕುಟ್ಟಿ ಅವರು ನಿರ್ಣಯ ಮಂಡಿಸಿದರು. ಈ ನಿರ್ಣಯಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸರ್ವಾನುಮತದ ಒಪ್ಪಿಗೆ ನೀಡಿತು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಕೇರಳ, ತೆಲಂಗಾಣ, ತಮಿಳುನಾಡು, ಆಂದ್ರ ಪ್ರದೇಶದ ನಾಯಕರು; ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆ ಆಗಿರುವುದರಿಂದ ಕುಮಾರಸ್ವಾಮಿ ಅವರು ಎದೆಗುಂದಬಾರದು ಎಂದು ನನಗೆ ಧೈರ್ಯ ಹೇಳಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು. ಸದಾ ನನ್ನ ಜತೆ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ, ಪಕ್ಷದ ಸಂಘಟನೆ ಹಾಗೂ ಮಹತ್ವದ ರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ದೇಶದ ಬೆಳವಣಿಗೆಗಳ ಬಗ್ಗೆ ಹಾಗೂ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಎರಡು ತಿಂಗಳಿಗೆ ಒಮ್ಮೆ ಕರೆಯುವಂತೆ ನಮ್ಮ ಪಕ್ಷದ ಕೇರಳ ರಾಜ್ಯದ ಹಿರಿಯ ನಾಯಕರಾದ ಡಾ. ನೀಲ ಲೋಹಿದಾಸ್ ನಾಡಾರ್ ಅವರು ಸಲಹೆ ಮಾಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಕೈಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕೇರಳದ ಪ್ರತಿನಿಧಿಗಳು ವಿಶೇಷವಾಗಿ ಪಕ್ಷದ ಸದಸ್ಯತ್ವ ನೋಂದಣಿಗೆ ಒತ್ತು ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಜೆಡಿಎಸ್ ಪಕ್ಷದ ನೆಲೆ ಇರುವ ಕಡೆಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಆರಂಭಿಸಲಾಗುವುದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಸತ್ ಭವನ: ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ
ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ತನ್ನ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ಅಲ್ಲದೆ, ಕಾಂಗ್ರೆಸ್ ಇವತ್ತು ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅದೇ ಆದಿವಾಸಿ ಮಹಿಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿದ್ದಾಗ ಕಾಂಗ್ರೆಸ್ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿದ್ದು ಯಾಕೆ ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಸಂಸತ್ ಭವನ ಉದ್ಘಾಟನೆಗೆ 21 ಪಕ್ಷಗಳು ಬಹಿಷ್ಕಾರ ಹಾಕಿವೆ. ಅದು ಆಯಾ ಪಕ್ಷದ ನಿಲವು. ಸಂಸತ್ ಭವನ ಯಾವುದೋ ಪಕ್ಷದ ಸಂಘಟನೆಗೆ ಸೀಮಿತವಾದ ಭವನ ಅಲ್ಲ. ದೇಶದ ಜನರ ತೆರಿಗೆ ಹಣದಿಂದ ಕಟ್ಟಿರುವ ಭವನ ಅದು. ರಾಷ್ಟ್ರಪತಿ ಗಳಿಂದ ಉದ್ಘಾಟನೆ ಆಗಬೇಕಿತ್ತು ಅನ್ನುವ ವಿಚಾರ ತೆಗೆದು ಕಾಂಗ್ರೆಸ್ ಬಹಿಷ್ಕಾರ ಮಾಡಲು ಮುಂದಾಗಿದೆ. ಇದೇ ಕಾಂಗ್ರೆಸ್ ಪಕ್ಷ ಛತ್ತೀಸಗಢದಲ್ಲಿ ವಿಧಾನಸಭಾ ಕಟ್ಟಡದ ಉದ್ಘಾಟನೆ ಮಾಡಲು ಸೋನಿಯಾ ಗಾಂಧಿ ಅವರಿಂದ ಅಡಿಗಲ್ಲು ಹಾಕಿಸಿತ್ತು. ಅಲ್ಲಿ ರಾಷ್ಟ್ರಪತಿ ಅವರು ನೆನಪಿಗೆ ಬರಲಿಲ್ಲವೇ? ಎಂದು ಅವರು ಕೇಳಿದರು.
ಕರ್ನಾಟಕದಲ್ಲಿ ವಿಕಾಸಸೌಧ ಉದ್ಘಾಟನೆ ಮಾಡಲು ರಾಷ್ಟ್ರಪತಿಗಳನ್ನು ಕರೆದಿದ್ದಾರಾ ಕಾಂಗ್ರೆಸ್ ನಾಯಕರು? ಅಂದು ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರೇ ವಿಕಾಸಸೌಧವನ್ನು ಉದ್ಘಾಟನೆ ಮಾಡಲಿಲ್ಲವೇ? ಈಗ ನೋಡಿದರೆ ಆದಿವಾಸಿ ಮಹಿಳೆಯನ್ನು ಕಡೆಗಣಿಸಿದ್ದಾರೆ ಅಂತಾ ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಕುಟುಕಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ಕಳಿಸಿದ್ದಾರೆ. ಹಾಗಾಗಿ ದೇವೇಗೌಡರು ಈ ಕಾರ್ಯಕ್ರಮಕ್ಕೆ ಹೋಗುಟ್ಟಿದ್ದಾರೆ. ಇದರಿಂದ ಬಿಜೆಪಿ ಬಗ್ಗೆ ಜೆಡಿಎಸ್ ಮೃದುಧೋರಣೆ ಅಂತಾ ತಿಳಿಯುವ ಅಗತ್ಯ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.