ಸುದ್ದಿಮೂಲ ವಾರ್ತೆ
ಮೈಸೂರು,ಮೇ 29: ಮೈಸೂರು-ಟಿ ನರಸೀಪುರ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತವಾಗಿದ್ದು ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದು, ಮೃತರು ಮೂಲತಃ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ.
ಮೈಸೂರು – ಕೊಳ್ಳೇಗಾಲ ಮುಖ್ಯರಸ್ತೆಯ ಟಿ. ನರಸೀಪುರದ ಸಮೀಪ ಕುರುಬೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, 10 ಮಂದಿ ಮೃತಪಟ್ಟಿದ್ದರೆ, ಒಂದು ಮಗು ಬದುಕುಳಿದಿದೆ.
ಬಳ್ಳಾರಿ ಮೂಲದ ಕುಂಟುಂಬದವರು ಮೈಸೂರು ಪ್ರವಾಸ ಮುಗಿಸಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಲು ಮೈಸೂರಿನಿಂದ ಇನ್ನೋವಾ ಕಾರು ಬಾಡಿಗೆ ಪಡೆದು ಹೋಗುತ್ತಿದ್ದರು. ಈ ಮಧ್ಯೆ ತಿ ನರಸೀಪುರ ತಾಲ್ಲೂಕಿನ ಕುರುಬೂರು ಬಳಿ ಇನ್ನೋವಾ ಕಾರಿಗೆ ಎಸ್ಆರ್ಎಂ ಖಾಸಗಿ ಬಸ್ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಣೆ ಹೊರಬೇಕು:
ಘಟನೆ ಕುರಿತು ಪ್ರತಿಕ್ರಿಸಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಖಾಸಗಿ ಬಸ್ ಮತ್ತು ಇನ್ನೋವಾ ಕಾರು ಡಿಕ್ಕಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
ರಸ್ತೆಯ ಬದಿಯ ಜಂಗಲ್ ಕಟಿಂಗ್ ಮಾಡದ ಕಾರಣ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಗಳಿಗೂ ಸರ್ಕಾರದ ತಕ್ಷಣವೇ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.