ಸುದ್ದಿಮೂಲವಾರ್ತೆ
ಕೊಪ್ಪಳ,ಮೇ 30 : ಭಾಗ್ಯ ನಗರ ಹಾಗು ಕೊಪ್ಪಳದಲ್ಲಿ ಫಾರ್ಮ್ ನಂಬರ್ 3.ನೀಡುವಲ್ಲಿ ಆಗಿರುವ ಸಮಸ್ಯೆ ಬೇಗನೇ ಬಗೆಹರಿಸಿ ಎಲ್ಲರಿಗೂ ಫಾರ್ಮ್ 3 ನೀಡಲಾಗುವುದು ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಇಂದು ಭಾಗ್ಯನಗರದಲ್ಲಿ ಅಭಿನಂದನಾ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾಗ್ಯನಗರದಲ್ಲಿ ಫಾರ್ಮ್ ನಂಬರ್ 3 ಗಾಗಿ ಹೋರಾಟ ನಡೆಸಲಾಗಿತ್ತು. ಈಗ ಫಾರ್ಮ್ ನಂಬರ್ 3 ನೀಡುತ್ತಿದ್ದಾರೆ. ಆದರೆ ನೀಡುವಲ್ಲಿ ವಿಳಂಭವಾಗುತ್ತಿದೆ ಅದನ್ನು ಬಗೆಹರಿಸುತ್ತೇನೆ ಎಂದರು.
ಕೊಪ್ಪಳ ಹಾಗು ಭಾಗ್ಯನಗರದಲ್ಲಿ ನಿರಂತರ ಕುಡಿವ ನೀರಿಗಾಗಿ 168 ಕೋಟಿ ರೂಪಾಯಿಯನ್ನು ಬೇಗ ಅನುಷ್ಠಾನಗೊಳಿಸಲಾಗುವುದು. ಕೊಪ್ಪಳ ಹಾಗು ಭಾಗ್ಯನಗರದ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಕೊಪ್ಪಳದಲ್ಲಿ 60 ಕೋಟಿ ರೂಪಾಯಿಯಲ್ಲಿ ಈಗ 450 ಹಾಸುಗೆ ಸುಪರ ಸ್ಪೇಷಾಲಿಟಿ ಆಸ್ಪತ್ರೆ ಸಿದ್ದವಾಗುತ್ತಿದೆ. ಅದನ್ನು 1000 ಹಾಸುಗೆ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಕಳೆದ ವರ್ಷದಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಯೋಜನೆಗಳಿಗೆ ಅನುದಾನ ಈ ಅವಧಿಯಲ್ಲಿ ಇನ್ನಷ್ಟು ಹೆಚ್ಚು ತಂದು ಅಭಿವೃದ್ದಿ ಪಡಿಸಲಾಗುವುದು ಎಂದರು.
ಕೊಪ್ಪಳದಲ್ಲಿ ವಿಮಾನ ನಿಲ್ದಾಣಕ್ಕೆ ಹಿಂದಿನ ಸರಕಾರದಲ್ಲಿ ಅನುದಾನ ನೀಡಿಲ್ಲ. ಆದರೆ ಈಗ ಅನುದಾನ ನೀಡಿ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು. ಸುಸಜ್ಜಿತ ನ್ಯಾಯಲಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಕೊಪ್ಪಳ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಂಕರಾಚಾರ್ಯರ ಮಠದ ಸ್ವಾಮೀಜಿಗಳು, ಮುಖಂಡರುಗಳಾದ ಯಮನಪ್ಪ ಕಬ್ಬೇರ, ಜುಲ್ಲು ಖಾದರ್ ಖಾದ್ರಿ, ಆಸೀಫ್ ಅಲಿ, ಎಸ್.ಬಿ. ನಾಗರಳ್ಳಿ, ಗೂಳಪ್ಪ ಹಲಗೇರಿ, ಜ್ಯೋತಿ ಎಂ. ಗೊಂಡಬಾಳ, ಸಲೀಂ ಅಳವಂಡಿ, ರಾಘವೇಂದ್ರ ಪಾನಘಂಟಿ, ಕೃಷ್ಣಾ ಇಟ್ಟಂಗಿ, ಶ್ರೀನಿವಾಸ ಗುಪ್ತಾ, ಹೊನ್ನೂರಸಾಬ್ ಭೈರಾಪೂರ, ಕಾಟನ್ಪಾಶಾ ಇತರರು ಇದ್ದರು.