ಸುದ್ದಿಮೂಲ ವಾರ್ತೆ
ಕಲಬುರಗಿ, ಮೇ.30: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಿದ 3000 ಕೋಟಿ ರೂ. ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಪತ್ರದ ಆಧಾರದಲ್ಲಿ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಟಿಪ್ಪಣಿ ಬರೆದಿರುವ ಮುಖ್ಯಮಂತ್ರಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ 3000 ಕೋಟಿ ರು. ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ದೂರುಗಳು ಎರಡು ಮೂರು ವರ್ಷಗಳಿಂದ ಕೇಳಿಬರುತ್ತಿವೆ. ಆದ್ದರಿಂದ ಈ ಕೂಡಲೇ ನಿರ್ದಾಕ್ಷಿಣ್ಯವಾಗಿ ಇಲಾಖೆ ತನಿಖೆ ನಡೆಸಿ ಎಲ್ಲೆಲ್ಲಿ ನಿಯಮಬಾಹಿರ ಅನುದಾನಗಳನ್ನು ವಿನಿಯೋಗಿಸಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ವಿಷಯದ ಕುರಿತು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗೆ ತಪ್ಪಿತಸ್ಥರ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಅಲ್ಲದೇ, ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗಾಗಿ ಬಿಡುಗಡೆ ಮಾಡಿ ವೆಚ್ಷಮಾಡಲಾಗಿರುವ 3.50 ಕೋಟಿ ರು. ಅನುದಾನವನ್ನು ಕೆಟಿಪಿಪಿ ಕಾಯ್ದೆಯನ್ವರ ಪ್ರಕ್ರಿಯೆಗಳನ್ನು ನಡೆಸದೆ ಹೆಚ್ಚುವರಿಯಾಗಿ 50 ಲಕ್ಷ ರು. ವೆಚ್ಚ ಮಾಡುವಲ್ಲಿ ಅಕ್ರಮಗಳು ನಡೆದಿವೆ ಎಂದು ದೂರು ಸಲ್ಲಿಕೆಯಾಗಿರುತ್ತವೆ. ಈ ವಿಷಯದ ಕುರಿತು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗೆ ತಪ್ಪಿತಸ್ಥರ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಬಿಡುಗಡೆ ಮಾಡಿ ವೆಚ್ಚ ಮಾಡಿರುವ 300 ಕೋಟಿ ರು. ಅನುದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ದೂರುಗಳು ಎರಡು ಮೂರು ವರ್ಷಗಳಿಂದ ಕೇಳಿ ಬರುತ್ತಿವೆ. ಈ ವಿಷಯದ ಕುರಿತು ನಿರ್ದಾಕ್ಷಿಣ್ಯವಾಗಿ ಇಲಾಖೆ ತನಿಖೆ ನಡೆಸಿ ಎಲ್ಲೆಲ್ಲಿ ನಿಯಮಬಾಹಿರವಾಗಿ ಅನುದಾನಗಳನ್ನು ವಿನಿಯೋಗಿಸಿ, ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ವಿಷಯದ ಕುರಿತು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗಾಗಿ ತಪ್ಪಿತಸ್ಥರ ವಿವರಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ.