ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ ಮೇ 30: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಅಮಾಯಕ ಮತದಾರರಿಗೆ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನು ನೀಡಿರುವ ವಿಚಾರ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಇದರ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವರು ಕ್ಷೇತ್ರದ 22 ಸಾವಿರ ಜನರಿಗೆ ಉಚಿತ ನಿವೇಶನ ಹಂಚಿಕೆ ಮಾಡುವುದಾಗಿ ಆಶ್ವಾಸನೆ ನೀಡಿ ಕೆಲವರಿಗೆ ನಕಲಿ ಹಕ್ಕು ಪತ್ರಗಳನ್ನು ನೀಡಿರುವ ಬಗ್ಗೆ ಸ್ವತಃ ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ವಿಧಾನಸಭೆಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು. ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನಗಳ ಹಕ್ಕುಪತ್ರಗಳನ್ನು ಪಡೆದಿರುವ ಕೆಲವರು ಸ್ವತಃ ನನ್ನನು ಭೇಟಿ ಮಾಡಿ ನಿವೇಶನ ಎಲ್ಲಿದೆಯೆಂದು ತೋರಿಸಿ ಎಂದು ಪ್ರಶ್ನಿಸುತ್ತಿದ್ದಾರೆ. ನಾನು ಸಹ ಉತ್ತರಿಸಲಾಗದೆ ಹಿಂದಿನ ಮಾಜಿ ಶಾಸಕರನ್ನು ಬೈದು ಬೈದು ಸಾಕಾಗಿ ಹೋಗಿದೆ. ವಿಧಾನ ಪರಿಷತ್ತಿನ ಸದಸ್ಯ ಅನಿಲ್ ಕುಮಾರ್ ಅವರ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿ ನಿವೇಶನಗಳ ಹಕ್ಕುಪತ್ರಗಳು ಅಸಲಿಯೋ? ನಕಲಿಯೋ? ಎಂದು ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇನ್ನೇನಿದ್ದರು ಹಕ್ಕುಪತ್ರಗಳು ಅಸಲಿಯತ್ತು ಬಹಿರಂಗಗೊಳಿಸಲು ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಡವರಿಗೆ ನಿವೇಶನ ದೊರೆಯಬೇಕು ಅದು ನನ್ನ ಗುರಿ. ಅಧಿಕಾರಿಗಳು ಸಹ ರಾಜಕೀಯ ಒತ್ತಡಗಳಿಗೆ ಮಣಿದು ಕೆಲಸವನ್ನು ಮಾಡಿದ್ದಾರೆ ಎಂದು ಗುಮಾನಿ ಇದೆ. ಒಂದು ವೇಳೆ ಅವರೂ ಸಹ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರ ಮೇಲೆಯೂ ಸಹ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.