ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಮೇ30: ಮಂಗಳವಾರ ಸಾಯಂಕಾಲ ಸುರಿದ ನಿರಂತರ ಮಳೆಯಿಂದಾಗಿ ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್ ಬಳಿ ಮಳೆ ನೀರು ಮುಖ್ಯರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು.
ಕಳೆದ ಕೆಲ ತಿಂಗಳುಗಳ ಹಿಂದೆ ಮಳೆಯಿಂದಾಗಿ ರಾಜ ಕಾಲುವೆ ನೀರು ಬೆಳ್ಳಂದೂರು ಇಕೋಸ್ಪೇಸ್ ರಸ್ತೆ ಮೇಲೆ ನೀರು ಹರಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಚಲಿತದಲ್ಲಿತ್ತು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಸಮಸ್ಯೆ ಆಲಿಸಿದ್ದರು. ಸಚಿವರ ಆದಿಯಾಗಿ ಈ ಸಮಸ್ಯೆ ಬಗ್ಗೆ ಪರಿಹರಿಸುವ ಕೆಲಸಕ್ಕೆ ಮುಂದಾಗಿದ್ದರು.
ಮುಂಗಾರು ಮಳೆ ಆರಂಭದಲ್ಲಿ ಈ ಸಮಸ್ಯೆ ಮರುಕಳಿಸಿದೆ. ಮಂಗಳವಾರ ಸುರಿದ ಮಳೆಯಿಂದಾಗಿ ಜನರು ತಾಸು ಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದರು. ವಾಹನಗಳು ಮಳೆ ನೀರಿನಲ್ಲಿ ಸಿಲುಕಿದವು. ಅತಿ ಹೆಚ್ಚು ಐಟಿಬಿಟಿ ಕ್ಷೇತ್ರ ಹೊಂದಿರುವ ಮಹದೇವಪುರ ಕ್ಷೇತ್ರ ಪ್ರತಿ ಸಾರಿ ಮಳೆ ಬಂದಾಗೆಲ್ಲೆಲ್ಲ ಈ ಸಮಸ್ಯೆ ಮಾಮೂಲಿ ಎನ್ನುವಂತಾಗಿತ್ತು.
ಕಳೆದ ಸಾರಿ ಎದುರಾದ ಸಮಸ್ಯೆಗೆ ಪರಿಹಾರವಾಗಿ ಬಿಬಿಎಂಪಿ ಅಲ್ಲಲ್ಲಿ ರಾಜಾ ಕಾಲುವೆ ಕಾಮಗಾರಿ ಕೈಗೆತ್ತಿಕೊಂಡಿದೆ. ಮಳೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದೆ ಇರುವುದರಿಂದ ಮತ್ತೆ ಸಮಸ್ಯೆ ಬಿಗಾಡಿಯಿಸಿದೆ.