ಸುದ್ದಿಮೂಲ ವಾರ್ತೆ
ಮೈಸೂರು, ಮೇ 31: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಇಲ್ಲಿನ ನಾಲ್ವರು ಪ್ರಮುಖ ಇಲಾಖೆಗಳ ಅಧಿಕಾರಿಗಳ ಮನೆ ಮೇಲೆ ಬುಧವಾರ ದಾಳಿ ನಡೆಸಿ.ಅದಾಯಕ್ಕಿಂತ ಹೆಚ್ಚು ಆಸ್ತಿಪಾಸ್ತಿ ಹೊಂದಿರುವ ಬಗ್ಗೆ ತೀವ್ರತರನಾದ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಅಪಾರ ಆಸ್ತಿ, ಹಣ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಮೈಸೂರು ಮಹಾ ನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಮಹೇಶ್ ಕುಮಾರ್, ನಂಜನಗೂಡಿನ ಸಬ್ ರಿಜಿಸ್ಟರ್ ಶಿವಶಂಕರ್ ಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ನಾಗೇಶ್ ಹಾಗೂ ಅದೇ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಮುತ್ತ ಅವರ ಮನೆ ಹಾಗೂ ಇತರ ಕಡೆ ಲೋಕಾಯುಕ್ತ ಪೋಲಿಸರು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡಿದರು.
ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ನೇತೃತ್ವದ ತಂಡ, ಮೈಸೂರಿನ ನಾಲ್ಕು ಅಧಿಕಾರಿಗಳ ಮನೆ ಹಾಗೂ ಇತರ ಕಡೆ ದಾಳಿ ಮಾಡಿತು. ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತ ಮಹೇಶ್ ಕುಮಾರ್ ಅವರ ಮೈಸೂರಿನ ನಿವೇದಿತಾ ನಗರದ ಮನೆ ಹಾಗೂ ಅವರಿಗೆ ಸೇರಿದ 13 ಕಡೆ, ಅದರಲ್ಲಿ ತೋಟದ ಮನೆ ಸೇರಿದಂತೆ ಹಲವಾರು ಕಡೆ ಲೋಕಾಯುಕ್ತರು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ನಂಜನಗೂಡಿನಲ್ಲಿ ಸಬ್ ರಿಜಿಸ್ಟರ್ ಆಗಿ ಕೆಲಸ ಮಾಡುತ್ತಿರುವ ಶಿವಶಂಕರ್ ಮೂರ್ತಿ ಅವರ ಮೈಸೂರಿನ ಮನೆ ಹಾಗೂ ಇತರ ಸ್ಥಳಗಳಲ್ಲಿ ಲೋಕಾಯುಕ್ತರ ತಂಡ ದಾಳಿ ಮಾಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆಯ ದೂರಿನ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೋಲಿಸರು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಇಂಜಿನಿಯರ್ ನಾಗೇಶ್ ಅವರ ಮೈಸೂರಿನ ಮನೆ ಹಾಗೂ ಇತರ ಕಡೆ ಅವರು ಆಸ್ತಿ ಮಾಡಿರುವ ಬಗ್ಗೆ ತಪಾಸಣೆ ಮಾಡಿ, ಕೆಲವು ಲೆಕ್ಕಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ವರ್ಷಗಳಿಂದ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರುವ ಮುತ್ತ ಅವರ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಇರುವ ಮನೆಯ ಮೇಲೆ, ಆಸ್ತಿ ಹೊಂದಿರುವ ಬಗ್ಗೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.