ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.1: ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಘಪರಿವಾರದ ಹಿರಿಯ ನಾಯಕ ಬಿ.ಎಲ್. ಸಂತೋಷ್, ಅವರ ವೈಫಲ್ಯವೇ ಮುಖ್ಯ ಕಾರಣ ಎಂದು ಕೇಂದ್ರ ಸಚಿವರೊಬ್ಬರು ಪ್ರಧಾನಿ ನರೇಂದ್ರಮೋದಿ ಅವರಿಗೆ ಸಮಗ್ರ ವರದಿ ನೀಡಿದ್ದಾರೆ.
ಈ ತ್ರಿಮೂರ್ತಿಗಳ ವೈಫಲ್ಯದಿಂದ ರಾಜ್ಯದಲ್ಲಿ ಬಿಜೆಪಿ ನೆಲ ಕಚ್ಚುವಂತಾಯಿತು. ಚುನಾವಣೆಯ ಸಾರಥ್ಯ ವಹಿಸಿದ್ದ ಇವರು ಸೂಕ್ತ ತಂತ್ರ, ಪ್ರತಿ ತಂತ್ರ ಹಣಿಯುವಲ್ಲಿ ವಿಫಲರಾದರು. ಕಾರ್ಯಕರ್ತರಲ್ಲಿ ಹುಮ್ಮಸ್ಸು, ಉತ್ಸಾಹ ಮೂಡಿಸುವಲ್ಲಿ ಹಿನ್ನೆಡೆ ಅನುಭವಿಸಿದ ಕಾರಣ ಚುನಾವಣಾ ರಣಕಣದಲ್ಲಿ ಹಿಂದುಳಿಯಬೇಕಾಯಿತು ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರತಿಯಾಗಿ ರಣತಂತ್ರ ಹೆಣೆಯುವುದರಲ್ಲಿ ಬಿಜೆಪಿ ವಿಫಲವಾಯಿತು. ಇದಕ್ಕೆ ಈ ಮೂವರು ನಾಯಕರು ನೇರವಾಗಿ ಹೊಣೆಗಾರರು ಎಂದು ಈ ಸಚಿವರು ಪ್ರಧಾನಿಯವರಿಗೆ ವರದಿ ನೀಡಿದ್ದಾರೆ ಎಂದು ವಿವರಿಸಿವೆ.
ಕರ್ನಾಟಕದಲ್ಲಿ ಪಕ್ಷದ ಸೋಲಿಗೆ ಕಾರಣವೇನು ಎಂದು ಪ್ರಧಾನಿ ನರೇಂದ್ರಮೋದಿ ಅವರು ತಮ್ಮಿಂದ ವರದಿ ಬಯಸಿದ್ದರಿಂದ,ವಿವರವಾಗಿ ಈ ಕುರಿತು ಮಾಹಿತಿ ನೀಡಿರುವ ಈ ಸಚಿವರು, ಸೋಲಿನ ಪ್ರಮುಖ ಕಾರಣಗಳನ್ನು ಬಿಡಿಸಿಟ್ಟಿದ್ದಾರೆ.
ಕರ್ನಾಟಕದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರಿರುವ ಈ ನಾಯಕರ ಪ್ರಕಾರ, ಚುನಾವಣೆ ಎದುರಿಸುವ ವಿಷಯದಲ್ಲಿ ಸ್ಥಳೀಯ ನಾಯಕತ್ವಕ್ಕೆ ಸ್ಪಷ್ಟ ತಂತ್ರವೇ ಇರಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಸೈನ್ಯ ನಿರ್ದಿಷ್ಟ ನೆಲೆಯಲ್ಲಿ ಹೋರಾಡಲು ಸಾಧ್ಯವಾಗಲಿಲ್ಲ.
ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯಾದ್ಯಂತ ಪದೇ ಪದೇ ಸುತ್ತಾಡಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಿತ್ತು. ಆದರೆ ಪಕ್ಷ ಅದಾಗಲೇ ಅಧಿಕಾರಕ್ಕೆ ಬಂದು ಬಿಟ್ಟಿದೆ ಎಂಬಂತೆ ನಡೆದುಕೊಂಡ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಸ್ವಂತ ಜಿಲ್ಲೆಯಲ್ಲೇ ಬಹುಕಾಲ ಕಳೆದರು.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವೂ ಜನರ ಮಧ್ಯೆ ನುಗ್ಗಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿಲ್ಲ.ಬೇರೆಯವರು ಕೆಲಸ ಮಾಡಲು ಹೋದರೆ, ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದರು. ಪರಿಣಾಮವಾಗಿ ಚುನಾವಣೆಯಲ್ಲಿ ಜವಾಬ್ದಾರಿ ಹೊರಬೇಕಾಗಿದ್ದ ಹಲವರು ಮೌನವಾಗಿರುವಂತೆ ಆಯಿತು.
ಇನ್ನು ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಸಂದರ್ಭದಲ್ಲಿ ಸಂಘ ಪರಿವಾರದ ನಾಯಕರೊಬ್ಬರು ಅನಪೇಕ್ಷಿತ ಮಾನದಂಡಗಳ ಬಗ್ಗೆ ಮಾತನಾಡುತ್ತಾ ಗೆಲ್ಲಬಲ್ಲವರಿಗೇ ಟಿಕೆಟ್ ತಪ್ಪಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸುವ ಔಚಿತ್ಯವೇ ಇರಲಿಲ್ಲ. ಆದರೆ ವಯೋಮಾನ ಸೇರಿದಂತೆ ಇನ್ನಿತರ ಕಾರಣಗಳನ್ನು ನೀಡಿ ಅವರಿಗೆ ಟಿಕೆಟ್ ತಪ್ಪಿಸಲಾಯಿತು.ಶೆಟ್ಟರ್ ಮತ್ತು ಈಶ್ವರಪ್ಪ ಅವರಿಗೆ ವಯಸ್ಸಿನ ಕಾರಣ ನೀಡಿ,ಮತ್ತೊಂದು ಕಡೆ ತಿಪ್ಪಾರೆಡ್ಡಿ ಅವರಂತಹ ಹಿರಿಯರಿಗೆ ಟಿಕೆಟ್ ಕೊಟ್ಟರು.
ಹೀಗೆ ವಯಸ್ಸಿನ ಮಾನದಂಡ ಒಬ್ಬೊಬ್ಬರ ವಿಷಯದಲ್ಲಿ ಒಂದೊಂದು ರೀತಿ ಇದ್ದ ಕಾರಣದಿಂದ ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಕುತಂತ್ರ ಎಂಬ ಭಾವನೆ ಬಂತು. ಪ್ರಬಲ ಲಿಂಗಾಯತ ಸಮುದಾಯದಲ್ಲಿ ಬಿಜೆಪಿ ವಿರುದ್ದದ ಭಾವನೆ ದಟ್ಟವಾಯಿತು. ಇದರ ಪರಿಣಾಮವಾಗಿ,ಮುಂಬೈ-ಕರ್ನಾಟಕ ಮತ್ತು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ನಾವು ಗಣನೀಯ ಪ್ರಮಾಣದ ಕ್ಷೇತ್ರಗಳಲ್ಲಿ ಸೋಲು ಅನುಭವಿಸುವಂತೆ ಆಯಿತು.
ಹೀಗೆ ಟಿಕೆಟ್ ಹಂಚಿಕೆಯಲ್ಲಿ ಮಾಡಿಕೊಂಡ ಈ ಯಡವಟ್ಟಿನಿಂದ ನಾವು ನೂರು ಸೀಟುಗಳ ಗಡಿ ತಲುಪುವ ಅವಕಾಶವನ್ನು ಕಳೆದುಕೊಂಡಿವಿ.ಇದಕ್ಕೆಲ್ಲ ಸಂಘಪರಿವಾರದ ಈ ನಾಯಕರ ಧೋರಣೆಯೇ ಕಾರಣ.ಹೀಗೆ ಮತದಾರರಲ್ಲಿ ವಿಶ್ವಾಸ ಮೂಡಿಸುವಂತಹ ಕೆಲಸವನ್ನು ಈ ನಾಯಕರು ಮಾಡದ ಕಾರಣಕ್ಕಾಗಿ ನಾವು ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು.
ಈಗಲೂ ವ್ಯವಸ್ಥಿತವಾಗಿ ಸಂಘಟನೆಯನ್ನು ಬಲಪಡಿಸಿದರೆ ಮತ್ತು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಿದರೆ ಸಂಸತ್ ಚುನಾವಣೆಯಲ್ಲಿ ನಾವು ಯಶಸ್ಸು ಪಡೆಯಬಹುದು ಎಂದು ಈ ಕೇಂದ್ರ ಸಚಿವರು ಪ್ರಧಾನಿ ನರೇಂದ್ರಮೋದಿ ಅವರಿಗೆ ವರದಿ ನೀಡಿದ್ದಾರೆ ಎಂಬುದು ಮೂಲಗಳು ತಿಳಿಸಿವೆ.