ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.2: ಪರಿಶಿಷ್ಟ ವರ್ಗದ ಯಾವುದೇ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತವಾಗದಂತೆ ಗುಣಾತ್ಮಕ ಶಿಕ್ಷಣ ನೀಡಲು ಕ್ರಮಕೈಗೊಳ್ಳಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮುದಾಯವು ಸಾಕ್ಷರತೆಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಬೇಕು. ಸಮಾಜದ ಪ್ರತಿಯೊಬ್ಬ ಮಗುವು ಉನ್ನತ ಶಿಕ್ಷಣ ಪಡೆದು ಸ್ವಾವಲಂಭಿಯಾಗಿ ಮಾದರಿ ಜೀವನ ಸಾಗಿಸುವಂತಾಗಬೇಕು ಎಂದರು.
ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ನೀಡಿ, ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲಾಖೆಯು ಶಿಕ್ಷಣಕ್ಕೆ ಆದ್ಯತೆ ನೀಡಿ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಲಾಖೆಯ ಬಲವರ್ಧನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಕ್ರೀಡಾ ಚಟುವಟಿಕೆಗೆ ಪೂರಕವಾದ ಪರಿಕರಗಳನ್ನು ಒದಗಿಸಲಾಗುವುದು. ಅದರಲ್ಲೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ದೈಹಿಕವಾಗಿ ಬಲಿಷ್ಟವಾಗಿರುತ್ತಾರೆ. ಅದರಲ್ಲೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ದೈಹಿಕವಾಗಿ ಸದೃಡರಾಗಿದ್ದು, ಅವರಿಗೆ ತರಬೇತಿ ನೀಡಿದರೆ ಉತ್ತಮ ಕ್ರೀಡಾ ಪಟುಗಳಾಗುತ್ತಾರೆ. ಅವರಿಗೆ ಪೂರಕವಾಗಿ ಪರಿಕರ ಹಾಗೂ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ 2022-23ನೇ ಸಾಲಿನಲ್ಲಿ 1665 ಕೋಟಿ ಬಿಡುಗಡೆಯಾಗಿದ್ದು, 1650 ಕೋಟಿ ಅನ್ನು ವಿನಿಯೋಗಿಸಲಾಗಿದೆ. 2023-24ನೇ ಸಾಲಿಗೆ 1678 ಕೋಟಿಯನ್ನು ನಿಗದಿಪಡಿಸಲಾಗಿದೆ. ಇಲಾಖೆಯಲ್ಲಿ ಒಟ್ಟು 2815 ಹುದ್ದೆಗಳು ಮಂಜೂರಾಗಿದ್ದು, ಕೇವಲ 663ಹುದ್ದೆಗಳು ಭರ್ತಿಯಾಗಿವೆ. 2152 ಹುದ್ದೆಗಳು ಖಾಲಿ ಇವೆ. 119 ಆಶ್ರಮ ಶಾಲೆಗಳು ಹಾಗೂ 297 ವಿದ್ಯಾರ್ಥಿ ನಿಲಯಗಳಿದ್ದು, ಈ ಆಶ್ರಮಶಾಲೆ/ವಿದ್ತಾರ್ಥಿ ನಿಲಯಗಳಲ್ಲಿ ಒಟ್ಟು 40,106 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1,59,391 ಪರಿಶಿಷ್ಟ ಪಂಗಡಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ.19.77 ಕೋಟಿಗಳ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. ಮೆಟ್ರಿಕ್ ನಂತರದ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ 129862 ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ರೂ.146 ಕೋಟಿಗಳ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಿರ್ದೇಶಕ ಪಿ.ಎಸ್. ಕಾಂತರಾಜು ಅವರು ಇಲಾಖೆಯ ಪ್ರಗತಿ ವರದಿಯನ್ನು ವಿವರಿಸಿದರು. ಉಪನಿರ್ದೇಶಕ ಕೆ.ಆರ್. ರಾಜಕುಮಾರ್, ಹೆಚ್. ಎಂ. ಸುರೇಶ್ ರೆಡ್ಡಿ, ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.