ಸುದ್ದಿಮೂಲ ವಾರ್ತೆ
ಹಾಸನ, ಜೂ.03: ವ್ಯಕ್ತಿಯ ನಿರ್ಮಾಣ ಮತ್ತು ಸಮಾಜದ ಉನ್ನತಿಯಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಕೊಡುಗೆ ಹೊಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದಲ್ಲಿ ಸೆಂಟ್ ಜೋಸೆಫ್ ಕಾಲೇಜಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಮೂಡಿಸುವ ಮತ್ತು ಆಧುನಿಕ ಜ್ಞಾನದ ಜೊತೆಗೆ ಸಂಸ್ಕೃತಿಯ ಸಂರಕ್ಷಣೆ, ರಾಷ್ಟ್ರದ ಏಕತೆ-ಸಮಗ್ರತೆ ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ ಎಂದರು.
ಸ್ವಾಮಿ ವಿವೇಕಾನಂದರ ಪ್ರಕಾರ, ‘ಶಿಕ್ಷಣದಿಂದ ವ್ಯಕ್ತಿತ್ವವು ರೂಪುಗೊಳ್ಳುತ್ತದೆ, ಮಾನಸಿಕ ಬೆಳವಣಿಗೆಯಾಗುತ್ತದೆ, ಬುದ್ಧಿವಂತಿಕೆಯು ಬೆಳೆಯುತ್ತದೆ ಮತ್ತು ಮನುಷ್ಯ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುತ್ತಾನೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಹೊಸ ಭಾರತ, ಶ್ರೇಷ್ಠ ಭಾರತವನ್ನು ನಿರ್ಮಿಸುವ ದೃಷ್ಟಿಯಲ್ಲಿ ಜೆಸ್ಯೂಟ್ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಸೇಂಟ್ ಜೋಸೆಫ್ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಸುಸಜ್ಜಿತ ವಾತವರಣವನ್ನು ವಿದ್ಯಾಲಯದಲ್ಲಿ ಕಲ್ಪಿಸಿದೆ ಎಂದರು.
ಭಾರತ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಇದನ್ನು ಅಳವಡಿಸಿಕೊಂಡಿರುವ ಸೆಂಟ್ ಜೋಸೆಫ್ ವಿದ್ಯಾ ಸಂಸ್ಥೆ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಒಳಗೊಳ್ಳುವ, ಗುಣಮಟ್ಟ, ಮಾನವೀಯ ಮತ್ತು ಉತ್ತಮ ಚಿಂತನೆ, ಮೌಲ್ಯಯುತ ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುತ್ತದೆ ಎಂದು ಹೇಳಿದರು.
ಶಾಸಕ ಸ್ವರೂಪ್ ಪ್ರಕಾಶ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಾರಾನಾಥ್, ಹಾಸನ ಜಿಲ್ಲಾಧಿಕಾರಿ ಅರ್ಚನಾ, ಪೊಲೀಸ್ ವರಿಷ್ಠಾಧಿಕಾರಿ ಹರಿಹರನ್ ಶಂಕರ್, ಫಾರ್ ಡಿಯೋನಿಸಿಯಸ್ ವಾಜ್, ಹಸನ್ ಜೆಸ್ಯೂಟ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ, ಡೇನಿಯಲ್ ಫೆರ್ನಾಂಡಿಸ್, ಪ್ರಾಂಶುಪಾಲರು, ಹಾಸನ ಜೆಸ್ಯೂಟ್ ಎಜುಕೇಷನ್ ಸೊಸೈಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.