ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ, 6; ಬರುವ 2023 -24 ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ 6.5% ರಿಂದ 6.7% ರಷ್ಟು ಏರಿಕೆಯಾಗಲಿದೆ ಎಂದು ಸಿಐಐ ಅಂದಾಜಿಸಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತೀಯ ಆರ್ಥಿಕತೆ ಪುಟಿದೇಳಲಿದ್ದು, ವಿತ್ತೀಯ ಸುಧಾರಣೆಗೆ ಪ್ರಮುಖ ದೇಶೀಯ ಅಡೆತಡೆಗಳು ಕಂಡು ಬಂದಿಲ್ಲ ಎಂದು ಸಿಐಐ ಅಧ್ಯಕ್ಷ ಆರ್. ದಿನೇಶ್ ಹೇಳಿದ್ದಾರೆ.
ಸಿಐಐ ಮುಖ್ಯಸ್ಥರಾಗಿ ಪದಗ್ರಹಣ ಮಾಡಿದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಮಧ್ಯಮಾವಧಿ ಬೆಳವಣಿಗೆ ಆರೋಗ್ಯಕರವಾಗಿದ್ದು, ಬಹು ಆಯಾಮದ ಸುಧಾರಣೆಗಳು, ವಿತ್ತೀಯ ಮತ್ತು ಆರ್ಥಿಕ ನೀತಿಗಳು, ಭಾರತೀಯ ಆರ್ಥಿಕತೆಗೆ ನೆರವಾಗಲಿವೆ. ಇದರಿಂದ ಮುಂದಿನ ದಶಕದಲ್ಲಿ ಸಿಎಜಿಆರ್ ಬೆಳವಣಿಗೆ 7.8% ರಷ್ಟಿರಲಿದೆ. ಕಳೆದ ದಶಕದಲ್ಲಿ ಇದು 6.6% ರಷ್ಟಿತ್ತು ಎಂದು ಮಾಹಿತಿ ನೀಡಿದರು.
ಈ ನಿಟ್ಟಿನಲ್ಲಿ ಸಿಐಐ 8 ಪ್ರಮುಖ ಆದ್ಯತಾ ವಲಯಗಳನ್ನು ಗುರುತಿಸಿದೆ. ಮಾರುಕಟ್ಟೆ, ಕಾರ್ಮಿಕ, ಕೃಷಿ ಮತ್ತು ಇಂಧನ ವಲಯದಲ್ಲಿನ ಸುಧಾರಣೆಯಿಂದಾಗಿ ಭಾರತ ಜಾಗತಿಕ ಉತ್ಪಾದನಾ ತಾಣವಾಗಿ ಪರಿವರ್ತನೆಯಾಗಲಿದೆ. ಬಂಡವಾಳ ಮಾರುಕಟ್ಟೆಗೆ ನಾವೀನ್ಯತೆಯ ಮಾರ್ಗಗಳನ್ನು ರೂಪಿಸುವ ಅಗತ್ಯವಿದೆ. ಎರಡು ಟ್ರಿಲಿಯನ್ ಮೊತ್ತದ ರಫ್ತು ಗುರಿ ತಲುಪಲು ವ್ಯಾಪಕ ರಫ್ತು ಉತ್ತೇಜನಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಾಂಸ್ಥಿಕ ವಲಯದ ಭಾಗವಹಿಸುವಿಕೆಯನ್ನು ಸುಗಮಗೊಳಿಸಬೇಕು. ಅಭಿವೃದ್ಧಿಗೆ ಬಾಧಕವಾಗದಂತೆ ಇಂಧನ ಪರಿವರ್ತನಾ ಕ್ರಮಗಳನ್ನು ಕೈಗೊಳ್ಳಬೇಕು. ಕೈಗಾರಿಕಾ ಉದ್ದೇಶಕ್ಕೆ ಸುಗಮವಾಗಿ ಭೂಮಿ ದೊರಕಿಸಿಕೊಡುವ ಜೊತೆಗೆ ವ್ಯಾಪಾರ ಮತ್ತು ಆರ್ಥಿಕ ಕಾನೂನುಗಳನ್ನು ಸರಳೀಕರಣಗೊಳಿಸಬೇಕು. ಸುಗಮ ವ್ಯವಹಾರ ವಲಯದಲ್ಲಿ ನಂಬಿಕೆ ಮೂಡಿಸಬೇಕು ಎಂದು ಸಿಐಐ ಅಧ್ಯಕ್ಷ ಆರ್. ದಿನೇಶ್ ಸಲಹೆ ಮಾಡಿದರು.