ಸುದ್ದಿಮೂಲ ವಾರ್ತೆ
ಮಾಲೂರು, ಜೂನ್ 6 : ಹಾಲು ಉತ್ಪಾದಕರು ನೀಡುವ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಿಂದ ಕೋಮುಲ್ ಒಕ್ಕೂಟವು 170 ಕೋಟಿ ರೂಪಾಯಿ ಲಾಭದಾಯಕದಲ್ಲಿದೆ ಎಂದು ಶಾಸಕ ಕೆ.ವೈ ನಂಜೇಗೌಡ ತಿಳಿಸಿದರು.
ಪಟ್ಟಣದ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಮಾಲೂರು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಕಾರ್ಯಕಾರಿ ಮಂಡಳಿ, ಹಾಲು ಉತ್ಪಾದಕರು ಐದು ವರ್ಷ ಕೋಚಿಮೂಲ್ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಾಸಕ ಕೆ. ವೈ ನಂಜೇಗೌಡರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನಗೆ ಅವಕಾಶಗಳನ್ನು ಮಾಡಿಕೊಟ್ಟ ತಾಲೂಕಿನ ಜನತೆಗೆ ಸನ್ಮಾನದ ಕೀರ್ತಿ ಸಲ್ಲುತ್ತದೆ. ಆವಕಾಶಗಳು ಹೆಚ್ಚಾದಂತೆ ಜವಾಬ್ದಾರಿಯು ಸಹ ಹೆಚ್ಚಾಗಿದ್ದು, ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ವಿಶೇಷವಾಗಿ ಹಾಲು ಉತ್ಪಾದಕ ಸಂಘಗಳು ಮೊದಲ ಅವಧಿಯಲ್ಲಿ ಶಾಸಕರಾಗಲು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ 250 ಕೋಟಿ ರೂ.ಗಳ ವೆಚ್ಚದಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿ ನಿರ್ಮಿಸಲಾಗಿದೆ. ಕೋಲಾರ ಒಕ್ಕೂಟದಲ್ಲಿ ಎಂವಿಕೆ ಗೋಲ್ಡನ್ ಡೈರಿ 285 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕಾರಣಾಂತರಗಳಿಂದ ವಿಳಂಬವಾಗಿದೆ.
ಒಕ್ಕೂಟ ಸಾಲಕ್ಕೆ ಸಿಗದಂತೆ ಅಭಿವೃದ್ಧಿಗೆ ಹಣ ಮೀಸಲಿಟ್ಟು ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಕೋಮುಲ್ ಒಕ್ಕೂಟದಲ್ಲಿ ಹಾಲು ಉತ್ಪಾದಕರು ನೀಡಿರುವ ಹಾಲಿನ ಮಾರಾಟದಿಂದ 120 ಕೋಟಿ ರೂ. ಲಾಭದಲ್ಲಿದೆ. ಹಾಲು ಉತ್ಪಾದಕ ಸಂಘಗಳು ಹಾಲು ಉತ್ಪಾದನೆ ಹಾಗೂ ಗುಣಮಟ್ಟ ಕಾಪಾಡುವ ನಿರ್ಧಾರದಿಂದ ಜಿಲ್ಲೆಯಾದ್ಯಂತ ಎಲ್ಲಾ ಸಹಕಾರ ಸಂಘಗಳು ಲಾಭದಾಯಕವಾಗಿದೆ. ಶೇ.95ರಷ್ಟು ಹಾಲಿನ ಗುಣಮಟ್ಟವಿದ್ದು, 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.
ಈ ಮೂಲಕ ಹಾಲು ಉತ್ಪಾದಕರ ಸಂಘಗಳ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು. ಮಾಲೂರಿನಲ್ಲಿ ಮಾದರಿ ಶಿಬಿರ ಕಚೇರಿ ನಿರ್ಮಾಣ ಮಾಡಿದ ನಂತರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಹ ಶಿಬಿರ ಕಚೇರಿ ಸ್ವಂತ ಕಟ್ಟಡ ನಿರ್ಮಿಸಲಾಗುತ್ತಿದೆ. ರಾಜ್ಯದ 15 ಒಕ್ಕೂಟಗಳಲ್ಲಿ ಕೋಲಾರ ಒಕ್ಕೂಟವು ಹಾಲು ಉತ್ಪಾದಕರಿಗೆ ಹೆಚ್ಚಿನ ಹಾಲಿನ ದರ ನೀಡುತ್ತಿದೆ. ಅಲ್ಲದೆ, ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ವಿಮೆ ಮಾಡಿಸಿರುವ ಹಸು ಮಾಲೀಕರಿಗೆ 70 ಸಾವಿರ ವಿಮೆ ಪರಿಹಾರ ಹಣ, ಹಾಲು ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ಹಲವಾರು ಅನುಕೂಲಗಳನ್ನು ಒಕ್ಕೂಟದಿಂದ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಸರ್ಕಾರ ಕಡಿತಗೊಳಿಸದೆ, ಹಾಲಿನ ದರವನ್ನು ಹೆಚ್ಚಿಸು ಮೂಲಕ ಉತ್ಪಾದಕರಿಗೆ ಅನುಕೂಲ ಕಲ್ಪಿಸಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಮುಲ್ ಒಕ್ಕೂಟದ ವ್ಯವಸ್ಥಾಪಕ ಗೋಪಾಲ್, ಮಾಲೂರು ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ. ಚೇತನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ಪುರಸಭಾ ಸದಸ್ಯ ಎ.ರಾಜಪ್ಪ, ಯುವ ಮುಖಂಡ ಸುನೀಲ್ ನಂಜೆಗೌಡ, ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಹಾಲು ಉತ್ಪಾದಕರು ಸಭೆಯಲ್ಲಿ ಉಪಸ್ಥಿತರಿದ್ದರು.