ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ೦7:ರಾಜಧಾನಿಯ ಹೊರ ವಲಯದ ಐದು ಕಡೆ ಗೃಹ ಮಂಡಳಿ ವತಿಯಿಂದ ಹೈಟೆಕ್ ಸಿಟಿ ನಿರ್ಮಾಣ ಹಾಗೂ ನಾಲ್ಕು ಕಡೆ ಐಷಾರಾಮಿ ವಿಲ್ಲಾ ಯೋಜನೆ ಬಗ್ಗೆ ರೂಪು ರೇಷೆ ಸಿದ್ದಪಡಿಸಲು ವಸತಿ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದ್ದಾರೆ.
ಕಾವೇರಿ ಭವನದಲ್ಲಿ ಬುಧವಾರ ಗೃಹ ಮಂಡಳಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಬೆಂಗಳೂರಿನಲ್ಲಿ ವಸತಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಲಾ ಎರಡು ಸಾವಿರ ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆ ಸೌಲಭ್ಯ ಹೊಂದಿರುವ ಟೌನ್ ಶಿಪ್ ಹಾಗೂ ಖಾಸಗಿ ವಲಯದ ಮಾದರಿ ಐಷಾ ರಾಮಿ ವಿಲ್ಲಾ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲು ಹಾಗೂ ಅಗತ್ಯ ಜಮೀನು ಗುರುತಿಸಲು ನಿರ್ದೇಶನ ನೀಡಿದರು.
ಪ್ರತಿ ಉಪನಗರ ಯೋಜನೆಯಲ್ಲಿ 30 ಸಾವಿರ ನಿವೇಶನ ಹಾಗೂ ಐದು ಸಾವಿರ ಮನೆ ನಿರ್ಮಾಣ ಮಾಡಲು ಅವಕಾಶ ಇರುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು.
ವಿಲ್ಲಾ ಯೋಜನೆಗೆ ನಿಸರ್ಗದ ನಡುವಿನ 500 ಎಕರೆ ಪ್ರದೇಶ ಗುರುತಿಸಲು ಸೂಚನೆ ನೀಡಿದರು.
ಬಡವರಿಗಾಗಿ ರೂಪಿಸುವ ಯೋಜನೆಗಳಲ್ಲಿ ಲಾಭ ನೋಡಬೇಡಿ. ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಆಗಬೇಡಿ ಎಂದು ತಾಕೀತು ಮಾಡಿದರು.
ಸಭೆಯ ನಂತರ ಮಾತನಾಡಿದ ಸಚಿವರು, ನಗರದ ಒತ್ತಡ ಕಡಿಮೆ ಮಾಡಲು ಹೊರವಲಯದಲ್ಲಿ ಉಪನಗರ ನಿರ್ಮಾಣ ಅನಿವಾರ್ಯ. ಮೆಟ್ರೋ ಸೇರಿದಂತೆ ಸಮರ್ಪಕ ಸಾರಿಗೆ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಉಪನಗರ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.
ಪ್ರತಿ ಉಪನಗರ ಎರಡು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು 30 ಸಾವಿರ ನಿವೇಶನ, ಐದು ಸಾವಿರ ಮನೆ ನಿರ್ಮಾಣ ಆಗಲಿದೆ. ಐದು ಉಪನಗರಗಳಲ್ಲಿ ಒಟ್ಟು 1.50 ಲಕ್ಷ ನಿವೇಶನ, 25 ಸಾವಿರ ಮನೆ ನಿರ್ಮಾಣ ಆಗಲಿದೆ ಎಂದು ವಿವರಿಸಿದರು.
ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು, ವಿದೇಶಗಳಿಂದ ಇಲ್ಲಿ ಖಾಯಂ ವಾಸಿಸಲು ಸಾಕಷ್ಟು ಉದ್ಯಮಿಗಳು, ಗಣ್ಯರು ಬರುತ್ತಿದ್ದಾರೆ. ಹೊರವಲಯದಲ್ಲಿ ವಿಲ್ಲಾ ಗಳಿಗೆ ಬೇಡಿಕೆ ಇದೆ. ಹೀಗಾಗಿ ಗೃಹಮಂಡಳಿ ವತಿಯಿಂದ ಐಷಾರಾಮಿ ವಿಲ್ಲಾ ಯೋಜನೆ ರೂಪಿಸಲಾಗುವುದು. ಒಂದೊಂದು ವಿಲ್ಲಾ ಯೋಜನೆ 500 ಎಕರೆ ಪ್ರದೇಶದಲ್ಲಿ ಬರಲಿದ್ದು ಒಟ್ಟು 1000 ವಿಲ್ಲಾ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಜಮೀನು ಮಾಲೀಕರೊಂದಿಗೆ 50:50 ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ವಾಗಲಿದ್ದು ಗೃಹಮಂಡಳಿಗೆ ಭೂ ಸ್ವಾಧಿನ ವೆಚ್ಚದ ಹೊರೆಯಾಗುವುದಿಲ್ಲ ಎಂದು ತಿಳಿಸಿದರು.
ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್, ಗೃಹಮಂಡಳಿ ಆಯುಕ್ತರಾದ ಕವಿತಾ ಎಸ್. ಮನ್ನಿ ಕೇರಿ ಉಪಸ್ಥಿತರಿದ್ದರು.
ಟೈಮ್ ಪಾಸ್ ಮಾಡಲು ಬಂದಿಲ್ಲ
ಪ್ರಗತಿ ಪರಿಶೀಲನೆ ಸಭೆ ಗೆ ಸೂಕ್ತ ಮಾಹಿತಿಯೊಂದಿಗೆ ಬಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಚಿವರು ನಾನು ಟೈಮ್ ಪಾಸ್ ಮಾಡಲು ಬಂದಿಲ್ಲ. ಸಭೆ ಅಂದರೆ ಗಂಭೀರತೆ ಇಲ್ಲವೇ. ವಾರದ ಮುಂಚೆ ಸಭೆ ನಿಗದಿ ಆಗಿದ್ದರೂ ಸೂಕ್ತ ಮಾಹಿತಿ ನಿಮ್ಮ ಬಳಿ ಮಾಹಿತಿ ಇಲ್ಲದಿದ್ದರೆ ಹೇಗೆ ಎಂದು ಪ್ರೆಶ್ನೆ ಮಾಡಿದರು. ಮುಂದಿನ ಮಂಗಳವಾರ ಮತ್ತೊಮ್ಮೆ ಸಮಗ್ರ ಮಾಹಿತಿಯೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.