ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.೦7: ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ವಿಧಾನಸೌಧದ ಸಚಿವರ ಕಚೇರಿ ಇಂದು ವರ್ಣರಂಜಿತ ಯಕ್ಷಗಾನ ಕಲಾವಿದರ ಕಲರವದೊಂದಿಗೆ ದೇವರ ಪೂಜೆ ಮತ್ತು ಮಂತ್ರ ಪಠಣದ ಮೂಲಕ ಅಧಿಕೃತವಾಗಿ ಆರಂಭವಾಯಿತು.
ಸಚಿವರ ಪತ್ನಿ ಮತ್ತು ಮಕ್ಕಳು ಪೂಜೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಭೋವಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಆಗಮಿಸಿ ಆಶೀರ್ವದಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಬಿ ನಾಗೇಂದ್ರ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಹಾಗೂ ಮಾನಪ್ಪ ವಜ್ಜಲ್ ಅವರು ಆಗಮಿಸಿ ಸಚಿವರಿಗೆ ಶುಭ ಹಾರೈಸಿದರು. ಇವರಲ್ಲದೆ ಅನೇಕ ಹಿರಿಯ ಮಾಜಿ ಶಾಸಕರು ಹಾಗೂ ಸಚಿವರು ಈ ಸಂದರ್ಭದಲ್ಲಿ ಮಾನ್ಯ ಸಚಿವರ ಕಚೇರಿಗೆ ಭೇಟಿ ನೀಡಿ ಅಭಿನಂದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್ .ಮಂಜುಳಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಪಿ ಹಿರೇಮಠ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದರು ವರ್ಣ ರಂಜಿತ ವೇಷಭೂಷಣಗಳೊಂದಿಗೆ ಬಂದವರನ್ನು ಆಹ್ವಾನಿಸುತ್ತಿದ್ದದ್ದು ವಿಶೇಷವಾಗಿತ್ತು. ಭೇಟಿಗೆ ಬಂದವರೆಲ್ಲರಿಗೂ ಮಾನ್ಯ ಸಚಿವರು ದಯವಿಟ್ಟು ಪುಷ್ಪಗುಚ್ಛ ಹಾರ ಸ್ಮರಣಿಕೆ ಇತ್ಯಾದಿಗಳನ್ನು ತರದೆ ಕೇವಲ ಪುಸ್ತಕಗಳನ್ನು ಮಾತ್ರವೇ ಕೊಡುಗೆಯಾಗಿ ನೀಡಬೇಕೆಂದು ಮನವಿ ಮಾಡುತ್ತಿದ್ದದ್ದು ಗಮನ ಸೆಳೆಯಿತು