ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.7:
ಸಹಕಾರ ಇಲಾಖೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಬೃಹದಾಕಾರವಾಗಿ ಬೆಳೆದಿರುವ ಸಹಕಾರ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಹಕಾರಿಗಳೆಲ್ಲರೂ ಸಹ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಎಂದು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಸೂಚಿಸಿದರು. ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಸಹಕಾರ ಕ್ಷೇತ್ರದಿಂದ ಆಯ್ಕೆಯಾದ ಸಚಿವರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ, ಸಹಕಾರಿಗಳನ್ನು ಜನರು ಗೌರವಯುತವಾಗಿ ನೋಡುವಂತಾಗಬೇಕು. ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಅವಲೋಕಿಸಿ, ಅವುಗಳ ಪರಿಹಾರಕ್ಕೆ ರೂಪುರೇಷೆಗಳನ್ನು ತಯಾರಿಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ ಎಂದು ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ಕೃಷಿ ಪತ್ತಿನ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೆ ಇದರಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ಬಲವರ್ಧನೆಗೆ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಗ್ರಾಮೀಣ ಆರ್ಥಿಕತೆಯ ಬಹುಮುಖ್ಯ ಭಾಗವಾಗಿರುವ ಹೈನುಗಾರಿಕೆ ವಲಯ ಉತ್ತಮ ಪ್ರಗತಿ ಸಾಧಿಸಿದ್ದು, ಪ್ರತಿಯೊಬ್ಬ ರೈತರು ಸಹ ಈ ವಲಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಬಲಿಷ್ಠಗೊಳ್ಳುವಂತೆ ಈ ವಲಯವನ್ನು ಮತ್ತಷ್ಟು ಬಲಷ್ಠಗೊಳಿಸುವ ಗುರಿಯನ್ನು ಸಹ ನಾವು ಹಾಕಿಕೊಂಡಿದ್ದೇವೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ರವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ, ಈಗಾಗಲೇ ಸಹಕಾರ ಸಚಿವರಾದ ರಾಜಣ್ಣನವರು ಸಹಕಾರ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇವರ ಈ ಮಾತುಗಳನ್ನು ನಾನು ಸ್ವಾಗತಿಸುತ್ತೇನೆ. ಸಹಕಾರ ಕ್ಷೇತ್ರ ಯುವಜನರನ್ನು ಆಕರ್ಷಿಸಬೇಕು. ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನಿನ ತಿದ್ದುಪಡಿಗಳಿಗೆ ನಮ್ಮ ಇಲಾಖೆಯಿಂದ ಸಂಪೂರ್ಣ ಬೆಂಬಲವಿದೆ. ಹಾಗೆಯೇ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಚಳವಳಿಯ ಪೂರಕ ಬೆಳವಣಿಗೆಗೆ ಸರ್ಕಾರ ಮಾಡಬೇಕಾದ ಕೆಲಸಗಳ ಕುರಿತಂತೆ ಮಾರ್ಗದರ್ಶನ ಮಾಡುವ ಮಾರ್ಗದರ್ಶಕನಂತೆ ಕೆಲಸ ನಿರ್ವಹಿಸಲು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಟೆಕ್ಸ್ಟೈಲ್ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ರವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ಸಹಕಾರ ಇಲಾಖೆ ವಿವಿಧ ರಾಜ್ಯಗಳಲ್ಲಿ ವಿವಿಧ ಆಯಾಮಗಳೊಂದಿಗೆ ಕೆಲಸವನ್ನು ನಿರ್ವಹಿಸುತ್ತಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸಗಳನ್ನು ಮಾಡಬೇಕು. ರಾಜ್ಯದ ಬೆನ್ನೆಲುಬಾದ ರೈತರ ಬವಣೆಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಹಾಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಬಲವರ್ಧನೆಗೆ ಶ್ರಮಿಸೋಣ. ಸಹಕಾರ ಕ್ಷೇತ್ರದ ಮೂಲಕ ಸಾಧ್ಯವಾದಷ್ಟು ಜನಸಾಮಾನ್ಯರಿಗೆ ಅನುಕೂಲಗಳನ್ನು ಕಲ್ಪಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರು ಸಚಿವರುಗಳನ್ನು ಗೌರವಿಸಿದರು. ನಂತರ ಮಾತನಾಡಿ ಇದೊಂದು ಮಹಾಮಂಡಳದಲ್ಲಿ ಐತಿಹಾಸಿಕ ದಿನವಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಹಲವಾರು ಜನಮನ್ನಣೆಗಳನ್ನು ಗಳಿಸಿರುವ ಸಹಕಾರಿ ಮುಖಂಡರುಗಳು ಸಚಿವರುಗಳಾಗಿ ಆಯ್ಕೆಯಾಗಿರುವುದು ಸಹಕಾರ ಕ್ಷೇತ್ರದ ಪೂರಕ ಬೆಳವಣಿಗೆಗೆ ಉತ್ತಮ ಅವಕಾಶಗಳನ್ನು ನಿರ್ಮಾಣ ಮಾಡಿದೆ.
ಸಹಕಾರ ಕ್ಷೇತ್ರದಲ್ಲಿ ರಾಜ್ಯ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಯಕರಾದ ರಾಜಣ್ಣ ಅವರು ಸಹಕಾರ ಸಚಿವರಾಗಿರುವುದು ಸಹಕಾರಿ ರಂಗಕ್ಕೆ ಬಹುದೊಡ್ಡ ವರದಾನವಾಗಿದೆ. ಹಾಗೆಯೇ ಕರ್ನಾಟಕದ ಹುಲಿ ಹಾಗೂ ಸಹಕಾರಿ ದಿಗ್ಗಜ ಎಂಬ ಖ್ಯಾತಿ ಹೊಂದಿದ್ದ ಕೆ.ಹೆಚ್. ಪಾಟೀಲರ ಮಗನಾದ ಹೆಚ್.ಕೆ. ಪಾಟೀಲ್ ರವರು ಕಾನೂನು ಸಚಿವರಾಗಿ ಆಯ್ಕೆಯಾಗಿರುವುದು ಸಹ ಸಹಕಾರಿ ವಲಯದ ಸಮಗ್ರ ಬದಲಾವಣೆಗೆ ಉತ್ತಮ ಅವಕಾಶ ನೀಡಿದೆ. ಹಾಗೆಯೇ ಇನ್ನೋರ್ವ ಸಹಕಾರಿ ಮುಖಂಡರಾದ ಶಿವಾನಂದ ಪಾಟೀಲ್ ರವರು ಸಹ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕೃಷಿ ರಂಗಕ್ಕೆ ಉತ್ತಮ ಆಯಾಮವನ್ನು ನೀಡುವರೆಂಬ ಭರವಸೆ ನಮ್ಮದಾಗಿದೆ ಎಂದು ತಿಳಿಸಿದರು. ನೂತನವಾಗಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಡಿ. ಹರೀಶ್ಗೌಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಡಿ. ಹರೀಶ್ಗೌಡ, ಮಾಜಿ ಶಾಸಕ ಭೀಮಾನಾಯಕ್, ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರಕುಮಾರ್, ಮಹಾಮಂಡಳದ ಉಪಾಧ್ಯಕ್ಷರಾದ ಜಗದೀಶ್ ಎಂ. ಕವಟಗಿಮಠ, ಆಡಳಿತ ಮಂಡಳಿ ನಿರ್ದೇಶಕರುಗಳು, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ ರಾವ್, ಕಾರ್ಯದರ್ಶಿ ಲಕ್ಷಿö್ಮÃಪತಯ್ಯ, ವಿವಿಧ ಸಹಕಾರ ಸಂಸ್ಥೆಗಳ ಅಧ್ಯಕ್ಷರುಗಳು ಹಾಗೂ ಉಪಾಧ್ಯಕ್ಷರುಗಳು ಮತ್ತಿತರರು ಉಪಸ್ಥಿತರಿದ್ದರು.