ಸುದ್ದಿಮೂಲ ವಾರ್ತೆ
ಮೈಸೂರು, ಜೂ. 7: ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಿರಂತರವಾಗಿ ನಾಶ ಮಾಡುತ್ತಿದ್ದ ಪುಂಡಾನೆಯನ್ನು ಗುಂಡ್ಲುಪೇಟೆ ತಾಲೂಕಿನ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.
ಜಯಪ್ರಕಾಶ್, ಪಾರ್ಥಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದ್ದು, ಕುಂದಕೆರೆ ಅರಣ್ಯ ವಲಯದ ಕೃಷಿ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು.
ರೋಸಿಹೋದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಬಂಡೀಪುರ ಸಿಬ್ಬಂದಿ ನಾಲ್ಕು ದಿನಗಳಿಂದ ಆನೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಕಾಡಾನೆ ಇರುವಿಕೆಯನ್ನು ಡ್ರೋಣ್ ಕ್ಯಾಮೆರಾ ಬಳಸಿ ಪತ್ತೆಮಾಡಲಾಗಿತ್ತು.
ಸೆರೆ ಸಿಕ್ಕ ಅಂದಾಜು 35 ವರ್ಷ ವಯಸ್ಸಿನ ಕಟ್ಟುಮಸ್ತಾದ ಒಂಟಿ ಸಲಗವನ್ನು ರಾಮಪುರ ಅರಣ್ಯ ಶಿಬಿರಕ್ಕೆ ರವಾನೆ ಮಾಡಲಾಯಿತು.