ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.8:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ರಾಜಕಾಲುವೆ(ಒಳಚರಂಡಿಗಳ)ಗಳ ಸ್ಥಿತಿಗತಿಯನ್ನುಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಯಮಲೂರು ಮುಖ್ಯ ರಸ್ತೆ ಬಳಿ ರಾಜಕಾಲುವೆ ಕಾಮಗಾರಿ ಪರಿಶೀಲಿಸಿ ತಾತ್ಕಾಲಿಕವಾಗಿ ಕಚ್ಚಾ ಡ್ರೈನ್ ನಿರ್ಮಿಸಲು ನಿರ್ದೇಶನ ನೀಡಲಾಗಿದೆ.
ಯಮಲೂರು ಮುಖ್ಯ ರಸ್ತೆ ಬಳಿ ದೊಡ್ಡಾನೆಕುಂಡಿ ಕೆರೆಯಿಂದ ಬೆಳ್ಳಂದೂರು ಕೋಡಿ ಕಾಲುವೆಗೆ ಸೇರುವ ಸುಮಾರು 700 ಮೀಟರ್ ಉದ್ದದ ಕಾಲುವೆಯ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಸುಮಾರು 500 ಮೀಟರ್ ಉದ್ದದ 7 ಮೀಟರ್ ಅಗಲದ ಕಚ್ಚಾ ಡ್ರೈನ್ ಅನ್ನು 12 ಮೀಟರ್ ಆರ್.ಸಿ.ಸಿ ಗೋಡೆಯುಳ್ಳ ಪಕ್ಕಾ ಡ್ರೈನ್ ಮಾಡಲಾಗಿದೆ. ಇನ್ನು ದಿವ್ಯಶ್ರೀ ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳ ಬಳಿಯ ಸುಮಾರು ಗೇಲ್ ಗ್ಯಾಸ್ ಲೈನ್ ನಿಂದಾಗಿ ಕೆಲವೆಡೆ ಅಗಲೀಕರಣ ಮಾಡುವ ಪ್ರಕ್ರಿಯೆ ವಿಳಂಭವಾಗಿದೆ. ಈ ಪೈಕಿ ಗೇಲ್ ಗ್ಯಾಸ ಲೈನ್ ಸ್ಥಳಾಂತರವಾಗುವವರೆಗೂ 7 ಮೀಟರ್ ಅಗಲದ ರಾಜಕಾಲುವೆ ಪಕ್ಕದಲ್ಲಿ ಕಚ್ಚಾ ಡ್ರೈನ್ ಮಾಡಿಕೊಂಡು ಮಳೆ ನೀರು ಸರಾಗವಾಗಿ ಹರಿದುಕೊಂಡು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದಿವ್ಯಶ್ರೀ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ಅನ್ನು ತೆರೆದು 12 ಮೀ.ಗೆ ವಿಸ್ತರಿಸಲಾಗುತ್ತಿದೆ. ಈ ಪೈಕಿ ಸದರಿ ಸ್ಥಳದಲ್ಲಿ ಏಕರೂಪದ ಹರಿವು ಮತ್ತು ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಳ್ಳಂದೂರು ಕೊಡಿ ಬ್ರಿಡ್ಜ್ ಬಾಕಿ ಕಾಮಗಾರಿಗೆ ವೇಗ ನೀಡಲು ಸೂಚನೆ:
ಬೆಳ್ಳಂದೂರು ಕೋಡಿಯ ಸ್ಲೂಯಿಸ್ ಗೇಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಪಾಲಿಕೆ ವತಿಯಿಂದ ಕೈಗೆತ್ತಿಕೊಂಡಿರುವ ಬೆಳ್ಳಂದೂರು ಕೊಡಿ ಬ್ರಿಡ್ಜ್ ವೆಂಟ್ ಅಗಲ 9 ಮೀ. ಮತ್ತು ಮೇಲಿನ ರಸ್ತೆಯ ಅಗಲ 12 ಮೀ. ಇದ್ದು, ಪ್ರಸ್ತುತ ಸೇತುವೆಯ ದ್ವಾರವು 24 ಮೀ. ಅಗಲ ಮಾಡಲಾಗಿದ್ದು,(8 ಮೀ. ನ 3 ದ್ವಾರಗಳು) ರಸ್ತೆಯ ಮೇಲ್ಭಾಗದ ಅಗಲವನ್ನು 30 ಮೀ ಹೆಚ್ಚಿಸಲಾಗುತ್ತಿದೆ. ಇದಿರಂದ ಮಳೆ ನೀರು ಸರಾಗವಾಗಿ ಹರಿಯುವುದರ ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆ ಕೂಡಾ ಕಡಿಮೆಯಾಗಲಿದೆ. ಸದ್ಯ 18 ಮೀ. ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಬಾಕಿ ಕಾಮಗಾರಿಗೆ ವೇಗ ನೀಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಂಬೋ ಡ್ರೈವ್ ನಿವಾಸಿಗಳು ಮಳೆನೀರುಗಾಲುವೆ ಕಾಮಗಾರಿ ನಡೆಸಲು ಸ್ಪಂದಿಸುವಂತೆ ಮನವಿ:
ಸರ್ಜಾಪುರ ರಸ್ತೆ ರೈಂಬೋ ಡ್ರೈವ್ ಬಳಿಯ ರಸ್ತೆಯಲ್ಲಿ ಸಮಾನಾಂತರ ಚರಂಡಿಯನ್ನು ಮಾಡುತ್ತಿದೆ ಮತ್ತು ಕೆಲವು ನ್ಯಾಯಾಲಯದ ಪ್ರಕರಣಗಳಿಂದಾಗಿ ರೈಂಬೋ ಡ್ರೈವ್ ಒಳಗೆ ಡ್ರೈನ್ ನಿರ್ಮಿಸಲು ಸಾಧ್ಯವಾಗಲಿಲ್ಲ. ಅಂತಹ ಎಲ್ಲಾ ತಡೆಗಳಿಗೆ ಸಂಬಂಧಿಸಿದಂತೆ ರೈಂಬೋ ಡ್ರೈವ್ ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ಸ್ಪಂದಿಸಿ ಮಳೆಗಾಲುವೆ ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಪಾಲಿಕೆಯ ರಾಜಕಾಲುವೆ ವಿಭಾಗದ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಂಜೂರು ಬಳಿಯ ಮೈನಾ ಅಪಾರ್ಟ್ಮೆಂಟ್ ಹತ್ತಿರ ರಾಜಕಾಲುವೆ ಕಾಮಗಾರಿ ಪರಿಶೀಲನೆ
ಗುಂಜೂರು ಬಳಿಯ ಮೈನಾ ಅಪಾರ್ಟ್ಮೆಂಟ್ ಹತ್ತಿರ 1.2 ಕಿ.ಮೀ ಉದ್ದದ 3 ಅಡಿ ಕಚ್ಚಾ ಡ್ರೈನ್ ನಲ್ಲಿ ಗಂಜೂರು ಕೆರೆಯಿಂದ ವರ್ತೂರು ಕೆರೆಗೆ ಮಳೆಗೆ ಹರಿದು ಹೋಗುತ್ತಿತ್ತು. ಅದನ್ನು 5 ಮೀಟರ್ ಅಗಲಕ್ಕೆ ಆರ್.ಸಿ.ಸಿ ತಡೆಗೋಡೆಯ ಕಾಲುವೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಪೈಕಿ ಈಗಾಗಲೇ 950 ಮೀಟರ್ ಉದ್ದದ ಕಾಲುವೆ ಕಾಮಗಾರಿ ಪೂರ್ಣಗೊಂಡಿದ್ದ, ಬಾಕಿ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಸೂಚನೆ ನೀಡಿದರು.
ವರ್ತೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚುರುಕು ನೀಡಲು ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ:
ವರ್ತೂರು ಕೆರೆಯಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ತೂರು ಕೋಡಿ ಬಳಿಯ ಸ್ಲೂಯಿಸ್ ಗೇಟ್ ಬಳಿ ತುಂಬಿರುವ ಹೂಳನ್ನು ಕೂಡಲೆ ತೆರವುಗೊಳಿಸಲು ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಶೀಲನೆಯ ವೇಳೆ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಬಿಡಿಎ ಆಯುಕ್ತರಾದ ಕುಮಾರ್ ನಾಯಕ್, ಮೆಟ್ರೋ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಸ್, ವಿಶೇಷ ಆಯುಕ್ತರಾದ ಪಿ.ಎನ್ ರವೀಂದ್ರ, ಡಾ. ತ್ರಿಲೋಕ್ ಚಂದ್ರ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.