ಸುದ್ದಿಮೂಲ ವಾರ್ತೆ
ಮಂಡ್ಯ, ಜೂ.8: ಕುಗ್ರಾಮದ ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣ ಪಡೆದಾಗಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಉದ್ಯಮಿ ಎಸ್. ಮದನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗಾಮನಹಳ್ಳಿ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಪಡೆದಾಗಲೇ ಮಕ್ಕಳ ಶಿಕ್ಷಣದ ಹಕ್ಕು ನಿಜವಾಗಿ ದೊರೆತಂತಾಗುತ್ತದೆ ಎಂದರು.
ಜ್ಞಾನ ಭಾರತಿ ಪ್ರೌಢಶಾಲೆಯ ಶೇ.100 ರಷ್ಟು ಫಲಿತಾಂಶಕ್ಕೆ ಕಾರಣರಾದ 10 ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಧನ ನೀಡುವ ಮೂಲಕ ಆ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಹಾಗೆಯೇ, ಪೋಷಕರಿಲ್ಲದ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸಿಬ್ಬಂದಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.