ದೇವದುರ್ಗ: ತಾಲ್ಲೂಕಿನ ಗಬ್ಬೂರು ಗ್ರಾಮ ಎರಡನೇ ಹಂಪಿ ಎಂದೇ ಪ್ರಸಿದ್ಧಿಯಾಗಿದೆ. ಗ್ರಾಮದ ಏಳು ಬಾವಿ ಹತ್ತಿರ ಪುರಾತನ ಕಾಲದ ಹರಿಹರ ದೇವಾಲಯದಲ್ಲಿ ಬಿಚ್ಚಾಲಿ ಮಠ ಎಂದು ಅನಧಿಕೃತವಾಗಿ ಲಿಂಗ ಸ್ಥಾಪನೆ ಮಾಡಿ ದೇವಸ್ಥಾನ ತಮ್ಮ ಅಧೀನಕ್ಕೆ ಪಡೆಯಲು ಮುಂದಾಗಿದ್ದರು. ಸಾಮಾಜಿಕ ಜಾಲತಾಣದ ಮೂಲಕ ವಿಷಯ ತಿಳಿದು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಕೂಡಲೇ ಎಚ್ಚೆತ್ತುಕೊಂಡ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ರಾಜರಾಮು ಮತ್ತು ಅಧಿಕಾರಿಗಳ ತಂಡ ದಿಢೀರನೆ ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರದ ದೇವಾಲಯದಲ್ಲಿ
ಅನಧಿಕೃತವಾಗಿ ಲಿಂಗ ಸ್ಥಾಪನೆಗೆ ಮುಂದಾಗಿದನ್ನು ತಡೆದು ಪುರಾತತ್ವ ಇಲಾಖೆಯ ಅಧಿಕಾರಿಗಳು ಹರಿಹರ ದೇವಸ್ಥಾನಕ್ಕೆ ಬೀಗ ಮುದ್ರೆ ಹಾಕಿ ಕೀಲಿಕೈ ವಶಪಡಿಸಿಕೊಂಡರು.
ನಂತರ ಉಪನಿರ್ದೇಶಕ ರಾಜರಾಮು ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಅವರು ಹರಿಹರ ದೇವಾಲಯವು 12ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. ಆದ್ದರಿಂದ ನಮ್ಮ ಇಲಾಖೆಯಿಂದ 2012-13 ಸಾಲಿನಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಆದರೂ ಸಹ ಕೆಲ ಮಠಾಧೀಶರು ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನ ವಶಪಡಿಸಿಕೊಂಡು ಲಿಂಗ ಪ್ರತಿಷ್ಠಾಪನೆಗೆ ಮುಂದಾಗಿರುವುದು ಅಪರಾಧ. ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಡಿ.ಡಿ ಶಿವಪ್ರಕಾಶ, ಪ್ರೇಮಲತಾ ಸೇರಿದಂತೆ ಅನೇಕರಿದ್ದರು.