ಅಧಿಕಾರಿಗಳು ರೈತಸ್ನೇಹಿಯಾಗಿ
ಅಧಿಕಾರಿಗಳ ಸಭೆಯಲ್ಲಿ ಸಿ.ಎಂ.ಸೂಚನೆ
ಸುದ್ದಿಮೂಲ ವಾರ್ತೆ
ಮೈಸೂರು, ಜೂನ್ 10 : ಮುಂಗಾರು ಪ್ರಾರಂಭವಾಗಿದ್ದು ರೈತರಿಗೆ ಬೀಜ,ಗೂಬ್ಬರ, ಕೀಟನಾಶಕಗಳ ಕೊರತಯಾಗದಂತೆ ಅಧಿಕಾರಿಗಳು ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿತ್ತಿದ ಬೀಜ ಶೇಕಡಾ ನೂರರಷ್ಟು ಬೆಳೆ ಬರಬೇಕು, ರೈತರು ಕೇಳುವ ಕಂಪನಿಯ ಬೀಜಗಳನ್ನು ಪೂರೈಸಿ, ಹಿಂದಿನ ಸಾಲಿನಲ್ಲಿ ಮಳೆ ಹಾನಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಸಂಪೂರ್ಣವಾಗಿ ಪಾವತಿಯಾಗಬೇಕೆಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಹಿಂದಿನ ಸಾಲಿನಲ್ಲಿ 3868 ರೈತರ 1267 ಹೆಕ್ಟೇರ್ ಬೆಳೆಹಾನಿಗೆ 1ಕೋಟಿ 14 ಲಕ್ಷ ರೂಗಳನ್ನು ರೈತರಿಗೆ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು,ಮೊದಲ ಆದ್ಯತೆ ಕುಡಿಯುವ ನೀರಿಗೆ ಇರಲಿ ಹಾಗೂ ಇನ್ನೆರಡು ದಿನಗಳಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಅಗತ್ಯವಿರುವ ಬೆಳೆಗಳಿಗೂ ನೀರು ಹರಿಸಿ ಕುಡಿಯುವ ನೀರು ಹಾಗೂ ಬೆಳೆ ಎರಡನ್ನೂ ಸರಿದೂಗಿಸಿ ಎಂದರು.ಕುಡಿಯುವ ನೀರು 20 ದಿನಗಳಿಗಾಗುವಷ್ಟಿದ್ದು, ಅಗತ್ಯ ಬಿದ್ದರೆ ಹೇಮಾವತಿ ನಾಲೆ ನೀರು ಬಳಸಿಕೂಳ್ಳಬಹುದೆಂಬ ಅಧಿಕಾರಿಗಳ ಅಭಿಪ್ರಾಯಕ್ಕೆ ಮುಖ್ಯಮಂತ್ರಿಗಳು ಆ ಜಿಲ್ಲೆಗಳ ಪರಿಸ್ಥಿತಿ ನೋಡಿಕೊಂಡು ಅಲ್ಲಿಯ ಕುಡಿಯುವ ನೀರು,ಬೆಳೆ ಪರಿಸ್ಥಿತಿ ಅವಲೋಕಿಸಿ ಕೆಲ ಜಿಲ್ಲೆಗಳಲ್ಲಿ ಸರಿಯಾದ ಸಿದ್ದತೆ ಮಾಡಿಕೊಳ್ಳದೇ ಕಲುಷಿತ ನೀರಿನಿಂದ ಬಹಳ ಸಮಸ್ಯೆ ಆಗಿದೆ, ಹಣಕಾಸಿನ ತೊಂದರೆ ಇಲ್ಲ ಸರಿಯಾಗಿ ಕಾರ್ಯ ನಿರ್ವಹಿಸಿ ಕುಡಿಯುವ ನೀರು ಒದಗಿಸಿ ಎಂದರು.
ರೈತರನ್ನು ಹಾಗೂ ಸಾರ್ವಜನಿಕರನ್ನು ಕಛೇರಿಗಳಿಗೆ ಅಲೆದಾಡಿಸಬೇಡಿ, ರಾಜಕಾರಣಿಗಳು ಸರ್ಕಾರಿ ನೌಕರರಿರುವುದು ಸಾರ್ವಜನಿಕರ ಸೇವೆ ಮಾಡಲು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಸರ್ಕಾರ ನಿಮ್ಮಿಂದ ಏನು ಬಯಸುತ್ತದೆ ಅದನ್ನು ಮಾಡಿ ಇಲ್ಲದಿದ್ದರೆ ಕಠಿಣ ಕ್ರಮ ಆಗುತ್ತದೆ ಎಂದರು.
ಸರ್ಕಾರಿ ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಬಗೆಗೆ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಯಾವುದೇ ಮಧ್ಯವರ್ತಿಗಳು, ಏಜೆಂಟ್ ರನ್ನು ಸಹಿಸುವುದಿಲ್ಲ ಎಲ್ಲಾ ಅಧಿಕಾರಿಗಳು ಸಾರ್ವಜನಿಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಜನ ನಮಗೆ ಭ್ರಷ್ಟಾಚಾರದ ವಿರುದ್ಧ ಮತ ನೀಡಿದ್ದಾರೆ. ಎಲ್ಲಾ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು ಇಲ್ಲದಿದ್ದರೆ ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.