ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.10: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧೃಡಪಡಿಸಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶುಕ್ರವಾರ ರಾತ್ರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿ ಏಮ್ಸ್ ಕಲಬುರ್ಗಿಯಲ್ಲಿ ಸ್ಥಾಪನೆ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿಕೆಯಿಂದ ಉಂಟಾದ ಗೊಂದಲ ನಿವಾರಣೆಗಾಗಿ ಚರ್ಚಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡುವುದಾಗಿ ತಮಗೆ ದೃಢಪಡಿಸಿದ್ದಾರೆ ಎಂದು ಸಚಿವ ಸುದ್ದಿಮೂಲ ಸಂಪರ್ಕಿಸಿದಾಗ ದೃಢಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ತೆರಳಿದಾಗ ನಾನು ಮತ್ತು ಉಪಮುಖ್ಯಮಂತ್ರಿ ಭರವಸೆ ನೀಡಿದ್ದು, ಅದರಂತೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲಾಗುವುದು. ಈ ಬಗ್ಗೆ ಶೀಘ್ರವೇ ಚರ್ಚೆ ನಡೆಸಿ ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಹ ಮುಖ್ಯಮಂತ್ರಿಗಳು ಹೇಳಿದರು ಎಂದು ಬೋಸರಾಜು ತಿಳಿಸಿದರು.
ಏತನ್ಮಧ್ಯೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೂ ಸಹ ಚರ್ಚೆ ನಡೆಸಿದಾಗ ಅವರೂ ಸಹ ನಾನು ಮಾಧ್ಯಮದಲ್ಲಿ ಆ ರೀತಿ ಹೇಳಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಮ್ಸ್ ಸ್ಥಾಪನೆ ಮಾಡುವುದಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಲ್ಲದೆ, ಕಾಂಗ್ರೆಸ್ ನೀಡಿದ ಪ್ರಣಾಳಿಕೆಯಂತೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ ಎಂದು ಬೋಸರಾಜ್ ಸ್ಪಷ್ಟಪಡಿಸಿದರು.
ಹೀಗಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವುದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಧೃಡಪಡಿಸಿದ ಹಿನ್ನೆಲೆಯಲ್ಲಿ ಗೊಂದಲ ನಿವಾರಣೆಯಾಗಿದೆ. ಏಮ್ಸ್ಗಾಗಿ ಬೇಡಿಕೆ ಈಡೇರಲಿದ್ದು, ಎಲ್ಲರೂ ರಾಯಚೂರಿನ ನಾಗರಿಕರು ಶಾಂತ ರೀತಿಯಿಂದ ಇರಬೇಕು ಮತ್ತು ನಾನು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಸಹ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಬದ್ಧರಾಗಿದ್ದು, ಡಾ. ಶರಣ ಪ್ರಕಾಶ ಪಾಟೀಲ್ ಸಹ ಇದನ್ನು ಸ್ಪಷ್ಟಪಡಿಸಿದ್ದರಿಂದ ಯಾವುದೇ ರೀತಿಯ ಗೊಂದಲಕ್ಕೆ ಈಡಾಗದೆ ಶಾಂತಿ ಕಾಪಾಡುವಂತೆ ಸಚಿವ ಬೋಸರಾಜ್ ಮನವಿ ಮಾಡಿದ್ದಾರೆ.
ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಹೇಳಿಕೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಏತನ್ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಭಾನುವಾರ ರಾಯಚೂರಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಎಲ್ಲರೂ ಶಾಂತಿ ಕಾಪಾಡುವಂತೆ ಬೋಸರಾಜು ಸಲಹೆ ಮಾಡಿದ್ದಾರೆ.
ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ನಾಲೆಗೆ ನೀರು: ಬೋಸರಾಜು
ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.10: ರಾಯಚೂರು ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ತುಂಗಭದ್ರಾ ಎಡದಂತೆ ನಾಲೆಯಿಂದ ಕುಡಿಯುವ ನೀರಿನ ಅವಲಂಬಿತ ರಾಯಚೂರು ನಗರ, ಮಾನ್ವಿ, ಸಿಂಧನೂರು ಸೇರಿದಂತೆ ಅನೇಕ ಹಳ್ಳಿಗಳು ಹಾಗೂ ಆಂಧ್ರ ಕ್ಯಾಂಪ್ಗಾಗಿ ನೀರಿನ ಅಭಾವ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂಬಂಧ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿದ್ದು, ಅವರು ಇನ್ನೆರಡು ದಿನಗಳಲ್ಲಿ ತುಂಗಭದ್ರಾ ಜಲಾಶಯದಿಂದ ಎಡದಂತೆ ನಾಲೆಗೆ ನೀರು ಬಿಡುಗಡೆ ಮಾಡಲು ಆದೇಶ ನೀಡುವುದಾಗಿ ತಿಳಿಸಿದ್ದು, ನೀರಾವರಿ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನಾಲೆಗೆ ನೀರು ಬಿಡುಗಡೆಯಾದ ಮೇಲೆ ಕುಡಿಯುವ ನೀರಿನ ಕೆರೆಗಳ ಭರ್ತಿ ಮಾಡುವಂತೆ ಸಹ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಬೋಸರಾಜು ಅವರು ಸುದ್ದಿಮೂಲ ಸಂಪರ್ಕಿಸಿದಾಗ ತಿಳಿಸಿದರು.
ಇದಲ್ಲದೆ, ರಾಯಚೂರು ಜಿಲ್ಲಾಧಿಕಾರಿಯವರೊಂದಿಗೆ ಸಹ ಇಂದು ಚರ್ಚೆ ನಡೆಸಿದ್ದು, ಜಲಾಶಯದಿಂದ ನೀರು ಬಿಡುಗಡೆಯಾದ ತಕ್ಷಣವೇ ನಾಲೆಯುದ್ದಕ್ಕು ಅಗತ್ಯ ಬಂದೋಬಸ್ತ್ ಕೈಗೊಂಡು ಸಿಂಧನೂರ, ಮಾನ್ವಿ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಕ್ಕೂ ನೀರು ಪೂರೈಕೆಯಾಗಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಹ ನಿರ್ದೇ
ಶನ ನೀಡಲಾಗಿದೆ ಎಂದು ಹೇಳಿದರು.