ಸುದ್ದಿಮೂಲ ವಾರ್ತೆ
ಆನೇಕಲ್, ಜೂನ್ 10 : ಆಸ್ತಿಗಾಗಿ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ಬೇರೆ ಬೇರೆ ಸ್ಥಳದಲ್ಲಿ ಬಿಸಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದ ಬಿಹಾರ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಬನ್ನೇರುಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಬನ್ನೇರುಘಟ್ಟ ಮೂಲದ ಗೀತಮ್ಮ ಕೊಲೆಯಾದ ಮಹಿಳೆ ಬಂಧಿತ ಆರೋಪಿ ಇಂಧಲ್ ಕುಮಾರ್ ಎನ್ನಲಾಗಿದೆ.
ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಕಾಲೋನಿ ನಿವಾಸಿಯಾದ ಗೀತಮ್ಮ ಎಂಬುವರನ್ನು ಇದೇ ತಿಂಗಳ ಒಂದರಂದು ಭೀಕರವಾಗಿ ಕೊಲೆ ಮಾಡಿ ಕಾಂಪೌಂಡ್ ನಲ್ಲಿ ಎಸೆದು ಪರಾರಿಯಾಗಿದ್ದರು. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ಓರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಸ್ತಿ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಬಿಹಾರ ಮೂಲಕ ಇಂಧಲ್ ಕುಮಾರ್, ಪಂಕಜ್ ಪಾಸ್ವಾನ್, ಸುಮಿತ್ ಮತ್ತು ಅಮಿತ್ ಗೀತಮ್ಮನವರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗೀತಮ್ಮ ಬಳಿ ಪಂಕಜ್ ಕುಮಾರ್ ಮೇ 27 ರಂದು ಆಸ್ತಿ ಪತ್ರಕ್ಕೆ ಸಹಿ ಮಾಡುವಂತೆ ಕೇಳಿದ್ದಾನೆ. ಸಹಿ ನೀರಾಕರಣೆ ಮಾಡಿದ್ದಕ್ಕೆ ಗೀತಮ್ಮಳನ ಮೊಬೈಲ್ ವೈರ್ ನಲ್ಲಿ ಕುತ್ತಿಗೆ ಸುತ್ತಿ ಕೊಲೆ ಮಾಡುವುದನ್ನು ಇಂಧಲ್ ಕುಮಾರ್ ನೋಡಿರುವುದಾಗಿ ತಿಳಿಸಿದ್ದಾನೆ.
ಬಳಿಕ ಅರೋಪಿಗಳು ದೇಹವನ್ನು ತುಂಡು ಮಾಡಿ ಬೇರೆ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದರು. ಪ್ರಮುಖ ಆರೋಪಿ ಪಂಕಜ್ ಪಾಸ್ವಾನ್ ಮತ್ತು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..