ಸುದ್ದಿಮೂಲ ವಾರ್ತೆ
ಆನೇಕಲ್, ಜೂನ್ 10 : ಸಾಮಾನ್ಯವಾಗಿ ರೈತರು ಗುಲಾಬಿ, ಚೆಂಡು ಹೂ, ಮಲ್ಲಿಗೆ, ಕಾಕಡ, ಕನಕಾಂಬರ ಸೇರಿದಂತೆ ವಿವಿಧ ಹೂಗಳನ್ನ ಬೆಳೆಯುವುದು ಸಾಮಾನ್ಯ. ಆದರೆ, ಉತ್ತರ ಅಮೆರಿಕ ಮತ್ತು ಹಾಲೆಂಡ್ ನಲ್ಲಿ ಬೆಳೆಯುವ ಹೂಗಳನ್ನ ಬೆಳೆದು ಸೈ ಎನಿಸಿಕೊಂಡಿದ್ದಾರೆ ಇಲ್ಲಿನ ರೈತರು. ವಿದೇಶಿ ಹೂಗಳನ್ನು ವಿದೇಶಗಳಿಗೆ ರಫ್ತು ಮಾಡುವ ಪುಷ್ಪೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಬಂದಿವೆ.
ಒಂದು ಕಡೆ ಬಣ್ಣ ಬಣ್ಣದ ಹೂಗಳು ನೀಲಿ, ನೇರಳೆ, ಬಿಳಿ, ಗುಲಾಬಿ ಸೇರಿದಂತೆ ವಿವಿಧ ಬಣ್ಣದ ಹೂಗಳು. ಕಣ್ಣು ಅರಳಿದಷ್ಟು ದೂರವೂ ಪುಷ್ಪ ರಾಶಿ, ಮತೊಂದು ಕಡೆ ಚಿತ್ತಾರ ಮೂಡಿಸುವ ಬಣ್ಣ ಬಣ್ಣದ ಹೂಗಳು. ಇದ್ಯಾವುದೋ ಪುಷ್ಪ ಪ್ರದರ್ಶನವಲ್ಲ. ಇದೆಲ್ಲ ಪಾಲಿಹೌಸ್ ನಲ್ಲಿ ಬೆಳೆದಿರುವ ವಿದೇಶಿ ಹೂಗಳ ತೋಟ.
ಆನೇಕಲ್ ತಾಲೂಕಿನ ದೊಡ್ಡ ಹಾಗಡೆ ಪ್ರಗತಿ ಪರ ರೈತ ಸುಬ್ಬಣ್ಣ ಮತ್ತು ಹರೀಶ್ ಗೌಡ ಅವರ ಕುಟುಂಬ ವಿದೇಶಿ ಹೂಗಳನ್ನು ಬೆಳೆಯುವ ಮೂಲಕ ಆಧುನಿಕ ಕೃಷಿಯಲ್ಲಿ ಭರವಸೆಯ ಹೆಜ್ಜೆ ಇಟ್ಟಿದ್ದಾರೆ. ವಿದೇಶಿ ಹೂಗಳಿಗೆ ಉತ್ತಮ ಮಾರುಕಟ್ಟೆ ಇರುವುದರಿಂದ ಲಿಸಿಯಾಂಥಸ್ ಬೆಳೆ ಬೆಳೆದು ಲಾಭ ಪಡೆದರು. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಇಂತಹ ಹೂಗಳನ್ನು ಹೆಚ್ಚು ಬೆಳೆಯುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಪ್ರಗತಿಪರ ರೈತ ಸುಬ್ಬಣ್ಣ ತಿಳಿಸಿದರು.
ಇನ್ನು, ತಾಲೂಕಿನ ದೊಡ್ಡಹಾಗಡೆಯಲ್ಲಿ 20 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹಾಲೆಂಡ್ ಮತ್ತು ಉತ್ತರ ಅಮೆರಿಕದಲ್ಲಿ ಬೆಳೆಯುವ ಈಸ್ಟಮ್ ,ಜಿಪ್ಸೋವಿಲ್ಲಾ, ಕಾರ್ನಿಶಿಯನ್, ಕ್ರೈ ಸಂಥ್ಯಮ್ ಜರ್ಬೇರ ಸೇರಿದಂತೆ ಬಗೆ ಬಗೆಯ ಹೂಗಳನ್ನು ಬೆಳೆದು ಲಾಭಗಳಿಸುತ್ತಿದ್ದಾರೆ . ಇನ್ನು ಆನೇಕಲ್ ತಾಲೂಕಿನಲ್ಲಿ ಮೊದಲ ಬಾರಿಗೆ ಲಿಸಿಯಾಂಥಸ್ (ಈಸ್ಟಮ್) ಹೂಗಳು ತೋಟದಲ್ಲಿ ಕೈಬೀಸಿ ಕರಿಯುವಂತಿದೆ.
ಅಲಂಕಾರಿಕ ಹೂಗಳಾಗಿರುವುದರಿಂದ ಹೆಚ್ಚಿನ ಬೇಡಿಕೆ ಇದೆ. ಇನ್ನು ವಿದೇಶಿ ಹೂಗಳನ್ನು ಇಲ್ಲಿ ವಾತಾವರಣಕ್ಕೆ ಹೊಂದಿಸಿಕೊಂಡು ಬೆಳೆಯುವುದು ಒಂದು ಸವಾಲು ಇದನ್ನು ಮೆಟ್ಟಿ ಹೂ ಬೆಳೆಯಬೇಕು. ಆದರೆ, ಬೆಳೆಗಳ ಏರುಪೇರು ಕೆಲವೊಮ್ಮೆ ಆದಾಯಕ್ಕೆ ಸಂಚಕಾರ ತರುತ್ತದೆ. ಆದರೂ, ಪುಷ್ಪ ಕೃಷಿ ನಮ್ಮನ್ನು ಕೈಬಿಟ್ಟಿಲ್ಲ ಎಂದು ರೈತ ಅನಂತ್ ತಿಳಿಸಿದರು.
ಲಾಭದಾಯಕ ಹೂಗಳಾಗಿದ್ದರು, ಹೂ ಗಿಡಗಳನ್ನು ಮಕ್ಕಳಂತೆ ನೊಡಿಕೊಳ್ಳಬೇಕು. ಲಿಸಿಯಾಂಥಸ್ ಹೂಗಳ ಗಿಡಗಳನ್ನು ಹಾಲೆಂಡ್ ನಿಂದ ತರಿಸಲಾಗಿದೆ ಉತ್ತರ ಅಮೇರಿಕಾ ಪ್ರದೇಶದಲ್ಲಿ ಈ ಹೂವುಗಳು ಹೆಚ್ಚು ಬೆಳೆಯುತ್ತಾರೆ. ಹೂಗಳನ್ನ ಅತ್ಯಂತ ಜೋಪಾನವಾಗಿ ಬೆಳೆಸಬೇಕು ವಿದೇಶಿ ಹೂಗಳಾಗಿದ್ದರಿಂದ ಹವಮಾನಕ್ಕೆ ತಕ್ಕಂತೆ ಮಕ್ಕಳಂತೆ ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ಎಕರೆಗೆ ಹೂ ಬೆಳೆಯಲಾಗಿದೆ 10 ಹೂವು ಕಡ್ಡಿಗಳ ಒಂದು ಕಟ್ಟಿಗೆ 300 ರೂ.ವರೆಗೆ ಮಾರಾಟವಾಗಲಿದೆ ಎನ್ನುತ್ತಾರೆ ರೈತ ಮಂಜುನಾಥ್.
ಒಟ್ಟಿನಲ್ಲಿ ಮದುವೆ ಮತ್ತು ಶುಭ ಕಾರ್ಯ ಸೇರಿದಂತೆ ವಿವಿಧ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವಗಳು ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ, ರೈತರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ಹೂಗಳಿಗೆ ನಿಷೇಧವನ್ನು ಹೇರಬೇಕು ಎಂದು ರೈತರು ಆಗ್ರಹಿಸಿದರು.